ಜೋಹಾನ್ಸ್‌ಬರ್ಗ್(ದಕ್ಷಿಣ ಆಫ್ರಿಕಾ): ಡಿಸೆಂಬರ್ 26ರಂದು ಸೆಂಚುರಿಯನ್‌ನಲ್ಲಿ ಆರಂಭವಾಗಲಿರುವ ಭಾರತ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಸರಣಿಯ ನಂತರ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಡೀನ್ ಎಲ್ಗರ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುವುದಾಗಿ ಶುಕ್ರವಾರ ಪ್ರಕಟಿಸಿದರು.
ಎಲ್ಗರ್ 2012ರಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. 84 ಟೆಸ್ಟ್ ಪಂದ್ಯಗಳನ್ನಾಡಿದ್ದು 13 ಶತಕ ಮತ್ತು 23 ಅರ್ಧಶತಕಗಳೊಂದಿಗೆ 37.28 ಸರಾಸರಿಯಲ್ಲಿ 5,146 ರನ್ ಗಳಿಸಿದ್ದಾರೆ. ಎಂಟು ಏಕದಿನ ಪಂದ್ಯಗಳನ್ನು ಆಡಿದ್ದಾರೆ. 2018ರಲ್ಲಿ ವೈಟ್-ಬಾಲ್ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು. ದಕ್ಷಿಣ ಆಫ್ರಿಕಾದ ಟೆಸ್ಟ್ ನಾಯಕರಾಗಿ 19 ಪಂದ್ಯಗಳನ್ನು ಮುನ್ನಡೆಸಿದ್ದು, ಈ ಪೈಕಿ 9 ಗೆಲುವು, 7 ಸೋಲು ಮತ್ತು 4 ಪಂದ್ಯಗಳು ಡ್ರಾ ಕಂಡಿದೆ.
"ಎಲ್ಗರ್ ಅವರು ಭಾರತ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ನಂತರ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನ ಕೊನೆಗೊಳಿಸುತ್ತಾರೆ. ಮೊದಲನೆಯ ಪಂದ್ಯ ಸೆಂಚುರಿಯನ್‌ನಲ್ಲಿ ಡಿಸೆಂಬರ್ 26-30ರವರೆಗೆ ಅವರ ತವರು ಮೈದಾನದಲ್ಲಿ ಮತ್ತು ಎರಡನೆಯದು ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್ ಕ್ರಿಕೆಟ್ ಮೈದಾನದಲ್ಲಿ ಜನವರಿ 3-7ರವರೆಗೆ ಪಂದ್ಯ ನಡೆಯಲಿದೆ" ಎಂದು ಕ್ರಿಕೆಟ್ ಸೌತ್ ಆಫ್ರಿಕಾ (CSA) ಹೇಳಿಕೆಯಲ್ಲಿ ತಿಳಿಸಿದೆ.