ಸೆಂಚುರಿಯನ್, ದಕ್ಷಿಣ ಆಫ್ರಿಕಾ:ಟೀಂ ಇಂಡಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಸೋಲನ್ನು ಅನುಭವಿಸಿದೆ. ಈ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ತಂಡದ ಬ್ಯಾಟ್ಸ್ಮನ್ ಮತ್ತು ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಈ ದಿಢೀರ್ ನಿರ್ಧಾರದಿಂದ ಕ್ರಿಕೆಟ್ ಪ್ರೇಮಿಗಳಲ್ಲಿ ಅಚ್ಚರಿ ಉಂಟಾಗಿದ್ದು, ಕ್ವಿಂಟನ್ ಅಭಿಮಾನಿಗಳಿಗೆ ನಿರಾಸೆಯಾಗಿದೆ.
ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸುವ ನಿರ್ಧಾರ ಪ್ರಕಟಿಸುವ ವೇಳೆ ಮಾತನಾಡಿದ ಕ್ವಿಂಟನ್ ಡಿ ಕಾಕ್ ' ಈ ನಿರ್ಧಾರ ಅತ್ಯಂತ ಸುಲಭವಾಗಿ ತೆಗೆದುಕೊಂಡಿದ್ದಲ್ಲ. ಈ ಬಗ್ಗೆ ನಾನು ಸಾಕಷ್ಟು ಆಲೋಚನೆ ಮಾಡಿದ್ದೇನೆ. ನನ್ನ ಕುಟುಂಬವನ್ನು ಆದ್ಯತೆಯಾಗಿ ತೆಗೆದುಕೊಳ್ಳಬೇಕಿದೆ. ನಾನು ಮತ್ತು ನನ್ನ ಪತ್ನಿ ಸಾಶಾ ಮಗುವನ್ನು ಸ್ವಾಗತಿಸಲಿದ್ದು, ಈ ಬಗ್ಗೆಯೂ ಯೋಚಿಸಿ, ನಿರ್ಧಾರ ತೆಗೆದುಕೊಂಡಿದ್ದೇನೆ' ಎಂದು ಸ್ಪಷ್ಟಪಡಿಸಿದ್ದಾರೆ.
ನನ್ನ ಕುಟುಂಬವೇ ನನಗೆ ಸರ್ವಸ್ವ, ನಮ್ಮ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗಲಿದ್ದು, ಅದಕ್ಕಾಗಿ ನಾನು ಸಮಯ ಕೊಡಬೇಕಿದೆ ಎಂದು ಕ್ವಿಂಟನ್ ಅಭಿಪ್ರಾಯಪಟ್ಟಿದ್ದಾರೆ.
ನಾನು ಟೆಸ್ಟ್ ಕ್ರಿಕೆಟ್ ಅನ್ನು ಪ್ರೀತಿಸುತ್ತೇನೆ ಮತ್ತು ನನ್ನ ದೇಶವನ್ನು ಪ್ರತಿನಿಧಿಸುವುದನ್ನು ನಾನು ಇಷ್ಟಪಡುತ್ತೇನೆ. ಆಡುವ ವೇಳೆ ನಾನು ಅನೇಕ ಏರಿಳಿತಗಳು, ನಿರಾಶೆಗಳನ್ನು ಅನುಭವಿಸಿದ್ದೇನೆ. ಆದರೆ ಈಗ ಅದಕ್ಕಿಂತ ಹೆಚ್ಚು ಪ್ರೀತಿಸುವುದನ್ನು ಕಂಡುಕೊಂಡಿದ್ದೇನೆ ಎಂದು ಡಿ ಕಾಕ್ ಹೇಳಿಕೊಂಡಿದ್ದಾರೆ.
ನಿಂತು ನೋಡಬಲ್ಲೆ: ಟೆಸ್ಟ್ ನಾಯಕತ್ವವನ್ನು ಒಂದು ಮೈಲಿ ದೂರದಲ್ಲಿ ನಿಂತು ನೋಡಬಲ್ಲನೇ ಹೊರತು, ಅದನ್ನು ನನ್ನ ಹೆಗಲ ಮೇಲೆ ಹೊರಲು ಸಾಧ್ಯವಿಲ್ಲ. ಟೆಸ್ಟ್ ಕ್ರಿಕೆಟ್ನಲ್ಲಿ ಟಾಪ್ ಆರ್ಡರ್ನಲ್ಲಿ ಆಡಲು ಬಯಸಿದ್ದೇನೆ. ಆದ್ದರಿಂದ ಆ ಹೆಚ್ಚುವರಿ ಒತ್ತಡದ ಅಗತ್ಯವಿಲ್ಲ ಎಂದು 2020ರಲ್ಲಿ ಕ್ವಿಂಟನ್ ಡಿ ಕಾಕ್ ಹೇಳಿಕೆ ನೀಡಿದ್ದರು.
ಈವರೆಗೆ 53 ಟೆಸ್ಟ್, 124 ಏಕದಿನ, 61 ಟಿ-20 ಪಂದ್ಯಗಳನ್ನು ಆಡಿರುವ ಅವರು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸನ್ರೈಸರ್ಸ್ ಹೈದರಾಬಾದ್, ರಾಜಸ್ಥಾನ ರಾಯಲ್ಸ್, ಡೆಲ್ಲಿ ಡೇರ್ಡೆವಿಲ್ಸ್, ರಾಯಲ್ ಚಾಲೆಂಜರ್ಸ್, ಮುಂಬೈ ಇಂಡಿಯನ್ಸ್ ಪರವಾಗಿ ಆಡಿದ್ದಾರೆ.
ಇದನ್ನೂ ಓದಿ:ಸೆಂಚುರಿಯನ್ ಟೆಸ್ಟ್: ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡಕ್ಕೆ 113 ರನ್ಗಳ ಜಯ, 1-0ಯಲ್ಲಿ ಸರಣಿ ಮುನ್ನಡೆ