ಕರ್ನಾಟಕ

karnataka

ETV Bharat / sports

'ಬಾಕ್ಸಿಂಗ್ ಡೇ ಟೆಸ್ಟ್‌' ಗೆದ್ದ ದಕ್ಷಿಣ ಆಫ್ರಿಕಾ; ಭಾರತದ ಬ್ಯಾಟಿಂಗ್ ವೈಫಲ್ಯ - ಭಾರತ

ಸೆಂಚುರಿಯನ್ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯವನ್ನು ದಕ್ಷಿಣ ಆಫ್ರಿಕಾ ಗೆದ್ದುಕೊಂಡಿದೆ.

ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ ಗೆಲುವು
ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ ಗೆಲುವು

By ETV Bharat Karnataka Team

Published : Dec 28, 2023, 9:45 PM IST

ಸೆಂಚುರಿಯನ್(ದಕ್ಷಿಣ ಆಫ್ರಿಕಾ):ಪ್ರವಾಸಿ ಭಾರತದ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್‌ ಪಂದ್ಯವನ್ನು ಆತಿಥೇಯ ದಕ್ಷಿಣ ಆಫ್ರಿಕಾ ಇನ್ನಿಂಗ್ಸ್​ ಮತ್ತು 32 ರನ್​ಗಳಿಂದ ಗೆದ್ದುಕೊಂಡಿದೆ. ದ.ಆಫ್ರಿಕಾ ಪರ ಮಾರ್ಕೊ ಜಾನ್ಸೆನ್ ಮತ್ತು ನಾಂದ್ರೆ ಬರ್ಗರ್ ಮಿಂಚಿನ ಬೌಲಿಂಗ್​ ದಾಳಿ ನಡೆಸಿದರು. ಎರಡನೇ ಇನ್ನಿಂಗ್ಸ್​ನಲ್ಲೂ ಭಾರತೀಯ ಬ್ಯಾಟರ್‌ಗಳು​​​ ಪೆವಿಲಿಯನ್ ಪರೇಡ್ ನಡೆಸಿದರು. ಹೀಗಾಗಿ 131 ರನ್​ಗಳಿಗೆ ತಂಡ ಆಲೌಟಾಯಿತು. ದ.ಆಫ್ರಿಕಾ ಸರಣಿಯಲ್ಲಿ 1-0ರ ಮುನ್ನಡೆ ಸಾಧಿಸಿದೆ.

ಮೂರನೇ ದಿನವಾದ ಇಂದು ಡೀನ್ ಎಲ್ಗರ್ ತಮ್ಮ ಉತ್ತಮ ಸ್ಟ್ರೋಕ್‌ ಪ್ಲೇ ಮುಂದುವರೆಸಿದರು. ಎಲ್ಗರ್ ಮತ್ತು ಜಾನ್ಸೆನ್ ದಿನದ ಮೊದಲ ಸೆಷನ್‌ನಲ್ಲಿ ಆರನೇ ವಿಕೆಟ್‌ಗೆ 111 ರನ್‌ ಜೊತೆಯಾಟ ಆಡಿದರು. ಈ ಜೊತೆಯಾಟ ದಕ್ಷಿಣ ಆಫ್ರಿಕಾದ ಗೆಲುವನ್ನು ಭದ್ರಪಡಿಸಿತು. ಆದರೆ ಎಲ್ಗರ್ (185) ಅವರನ್ನು ಶಾರ್ದೂಲ್ ಠಾಕೂರ್ ಔಟ್ ಮಾಡಿದ ನಂತರ, ಜಾನ್ಸೆನ್ ಅಜೇಯ 84 ರನ್ ಗಳಿಸಿ ಆಟ ಮುಂದುವರೆಸಿದರು. ಕೆಳ ಕ್ರಮಾಂಕದ ಬ್ಯಾಟರ್‌ಗಳ ಬೆಂಬಲದೊಂದಿಗೆ ತಂಡವನ್ನು ಒಟ್ಟು 408 ರನ್‌ಗಳಿಗೆ ತಲುಪಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್‌ನಲ್ಲಿ 163 ರನ್‌ಗಳ ಮುನ್ನಡೆ ಸಾಧಿಸಿತು.

ಭಾರತ ಪರ ಜಸ್ಪ್ರೀತ್ ಬುಮ್ರಾ 4 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ 2, ಶಾರ್ದೂಲ್ ಠಾಕೂರ್, ಪ್ರಸಿದ್ಧ್ ಕೃಷ್ಣ ಮತ್ತು ರವಿಚಂದ್ರನ್ ಅಶ್ವಿನ್ ತಲಾ ಒಂದೊಂದು ವಿಕೆಟ್ ಉರುಳಿಸಿದರು.

ಭಾರತ ಮೂರನೇ ದಿನ ತನ್ನ ಎರಡನೇ ಇನ್ನಿಂಗ್ಸ್​ ಅನ್ನು ಬೇಗನೆ ಆರಂಭಿಸಿತು. ಶುಭಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಹೊರತುಪಡಿಸಿ ಭಾರತೀಯ ಬ್ಯಾಟರ್‌ಗಳು ಆರಂಭದಿಂದಲೇ ಪ್ರಬಲ ಪೈಪೋಟಿ ನೀಡುವಲ್ಲಿ ವಿಫಲವಾದರು. ದಕ್ಷಿಣ ಆಫ್ರಿಕಾ ಸೀಮ್ ಬೌಲಿಂಗ್‌ಗೆ​ ಬ್ಯಾಟರ್​ಗಳು ರನ್​ ಗಳಿಸಲು ಪರದಾಡಿದರು. ಗಿಲ್​ (26) ಮತ್ತು ಕೊಹ್ಲಿ (76) ಬಿಟ್ಟರೆ ಬೇರೆ ಯಾವುದೇ ಬ್ಯಾಟರ್ ಎರಡಂಕಿಯಲ್ಲಿ ಸ್ಕೋರ್ ಮಾಡಲು ಸಾಧ್ಯವಾಗಲಿಲ್ಲ. ಹರಿಣಗಳ ಪರ ನಾಂದ್ರೆ ಬರ್ಗರ್ 4 ವಿಕೆಟ್ ಪಡೆದರೆ, ಮಾರ್ಕೊ ಜಾನ್ಸೆನ್ 3 ವಿಕೆಟ್ ಪಡೆದರು. ಕಗಿಸೊ ರಬಾಡ 2 ವಿಕೆಟ್‌ ಕಬಳಿಸಿದರು.

ಇದನ್ನೂ ಓದಿ:ಬಾಕ್ಸಿಂಗ್‌ ಡೇ ಟೆಸ್ಟ್​: ಎಲ್ಗರ್​ ಆಕರ್ಷಕ ಶತಕ, ಹರಿಣಗಳಿಗೆ 11 ರನ್‌ ಮುನ್ನಡೆ

ABOUT THE AUTHOR

...view details