ಸೆಂಚುರಿಯನ್ (ದಕ್ಷಿಣ ಆಫ್ರಿಕಾ):ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20 ಪಂದ್ಯ ಮಳೆ ಅಡ್ಡಿಯಾಗಿ ಮೊಟಕುಗೊಂಡರೆ, ಎರಡನೇ ಪಂದ್ಯದಲ್ಲಿ ಬ್ಯಾಟರ್ಗಳು ರನ್ ಮಳೆ ಸುರಿಸಿದ್ದಾರೆ. ಇಲ್ಲಿನ ಸೂಪರ್‌ಸ್ಪೋರ್ಟ್ ಪಾರ್ಕ್ ನಡೆದ ಪಂದ್ಯದಲ್ಲಿ ಹಲವು ಹೆಸರುಗಳು ದಾಖಲೆಯ ಪುಟ ಸೇರಿದವು. ಎರಡು ಇನ್ನಿಂಗ್ಸ್ನಿಂದ 517 ರನ್ ಹರಿದು ಬಂದಿದ್ದು ಇದು ಅಂತಾರಾಷ್ಟ್ರೀಯ ಟಿ20 ಮತ್ತು ಲೀಗ್ ಪಂದ್ಯದಲ್ಲೇ ಅತೀ ಹೆಚ್ಚಿನ ರನ್ ಗಳಿಕೆ!.
ಟಾಸ್ ಗೆದ್ದ ದಕ್ಷಿಣ ಆಫ್ರಿಕಾದ ನಾಯಕ ಐಡೆನ್ ಮಾರ್ಕ್ರಾಮ್ ವೆಸ್ಟ್ ಇಂಡೀಸ್ಗೆ ಬ್ಯಾಟಿಂಗ್ಗೆ ಆಹ್ವಾನ ಕೊಟ್ಟರು. ಅದರಂತೆ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 258 ರನ್ ದಾಖಲೆಯ ಗುರಿ ನೀಡಿತು. ಇದು ಅಂತಾರಾಷ್ಟ್ರೀಯ ಕ್ರಿಕೆಟ್ನ 5ನೇ ಅತೀ ಹೆಚ್ಚಿನ ಗುರಿಯೂ ಹೌದು. ಅಲ್ಲದೇ ವೆಸ್ಟ್ ಇಂಡೀಸ್ ಟಿ20ಯಲ್ಲಿ ದಾಖಲಿಸಿದ ಅತೀ ಹೆಚ್ಚಿನ ರನ್ ಕೂಡಾ ಇದೇ ಆಗಿದೆ. ದಕ್ಷಿಣ ಆಫ್ರಿಕಾ 259 ರನ್ ಸಾಧಿಸಿ ಅತಿ ಹೆಚ್ಚು ಗುರಿ ಬೆನ್ನತ್ತಿ ಗೆದ್ದ ತಂಡವೆಂಬ ದಾಖಲೆಯನ್ನೂ ಬರೆಯಿತು.
ಕ್ರಿಸ್ ಗೇಲ್ ದಾಖಲೆ ಮುರಿದ ಚಾರ್ಲ್ಸ್:ಈ ಇನ್ನಿಂಗ್ಸ್ನಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿದ ಜಾನ್ಸನ್ ಚಾರ್ಲ್ಸ್ ಕೇವಲ 39 ಎಸೆತಗಳಲ್ಲಿ ಶತಕ ಪೂರೈಸಿದರು. ಚಾರ್ಲ್ಸ್ ಶತಕದಾಟದಲ್ಲಿ 9 ಸಿಕ್ಸರ್ ಮತ್ತು 9 ಬೌಂಡರಿಗಳಿದ್ದವು. ಈ ಮೂಲಕ ಕ್ರಿಸ್ ಗೇಲ್ ದಾಖಲೆ ಮುರಿದರು. ಜಾನ್ಸನ್ ಚಾರ್ಲ್ಸ್ ಪಂದ್ಯದಲ್ಲಿ 46 ಬಾಲ್ ಎದುರಿಸಿ 10 ಫೋರ್ ಮತ್ತು 11 ಸಿಕ್ಸರ್ನಿಂದ 118 ರನ್ ಗಳಿಸಿ ಔಟಾದರು. ಈ ಹಿಂದೆ ಕ್ರಿಸ್ ಗೇಲ್ 2016ರಲ್ಲಿ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 47 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಏಳು ವರ್ಷದ ನಂತರ ಈ ದಾಖಲೆಯನ್ನು ಮತ್ತೊಬ್ಬ ವೆಸ್ಟ್ ಇಂಡೀಸ್ ಆಟಗಾರನೇ ಮುರಿದಿದ್ದಾರೆ.
ವಿಂಡೀಸ್ ಪರ ಚಾರ್ಲ್ಸ್ ಅಲ್ಲದೇ ಕೈಲ್ ಮೇಯರ್ಸ್ (51), ರೋವ್‌ಮನ್ ಪೊವೆಲ್ (28) ಮತ್ತು ರೊಮಾರಿಯೋ ಶೆಫರ್ಡ್ (41) ಕೂಡಾ ಅಬ್ಬರಿಸಿದರು. ಇವರ ಆಟದ ರಭಸಕ್ಕೆ ಒಂದೇ ಇನ್ನಿಂಗ್ಸ್ನಲ್ಲಿ 22 ಸಿಕ್ಸ್ಗಳು ದಾಖಲಾದವು. 2019ರಲ್ಲಿ ಅಫ್ಘಾನಿಸ್ತಾನ ಮತ್ತು ಐರ್ಲೆಂಡ್ ಪಂದ್ಯದಲ್ಲಿಯೂ 22 ಸಿಕ್ಸ್ಗಳು ಹರಿದು ಬಂದಿದ್ದವು. ಇವೆರಡು ಪ್ರಸ್ತುತ ಟಿ20 ಅತಿ ಹೆಚ್ಚು ಸಿಕ್ಸ್ ದಾಖಲೆಯ ಇನ್ನಿಂಗ್ಸ್ ಆಗಿದೆ.
ದಾಖಲೆಯ ರನ್ ಚೇಸ್:ವೆಸ್ಟ್ ಇಂಡೀಸ್ ಕೊಟ್ಟ ಬೃಹತ್ ಗುರಿಗೆ ಧೃತಿಗೆಡದ ಹರಿಣಗಳ ಪಡೆ ಈ ಗುರಿಯನ್ನು 7 ಎಸೆತ ಬಾಕಿ ಉಳಿಸಿಕೊಂಡು, 6 ವಿಕೆಟ್‌ಗಳೊಂದಿಗೆ ಜಯ ಸಾಧಿಸಿತು. ಇದರಿಂದ ಈ ಪಿಚ್ನಲ್ಲಿ ಎರಡು ಇನ್ನಿಂಗ್ಸ್ನಿಂದ 517 ಬರೋಬ್ಬರಿ ರನ್ ಹರಿದುಬಂತು. ದ.ಆಫ್ರಿಕಾ ಪರ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಅಬ್ಬರದ ಮೊದಲ ಅಂತಾರಾಷ್ಟ್ರೀಯ ಟಿ20 ಶತಕ ದಾಖಲಿಸಿದರು. 43 ಎಸೆತ ಎದುರಿಸಿದ ಅವರ ಆಟದಲ್ಲಿ 9 ಬೌಂಡರಿ, 8 ಸಿಕ್ಸ್ ಸೇರಿತ್ತು.