ಧರ್ಮಶಾಲಾ (ಹಿಮಾಚಲ ಪ್ರದೇಶ): ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮಂಗಳವಾರ ಬಲಿಷ್ಠ ದಕ್ಷಿಣ ಆಫ್ರಿಕಾದ ವಿರುದ್ಧ ನೆದರ್ಲ್ಯಾಂಡ್ಸ್ ತಂಡ ಅಚ್ಚರಿಯ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಡಚ್ಚರ ನಾಯಕ ಸ್ಕಾಟ್ ಎಡ್ವರ್ಡ್ಸ್ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ. ಭಾರತ ಕ್ರಿಕೆಟ್ ತಂಡ ಮಾಜಿ ನಾಯಕ ಕಪಿಲ್ ದೇವ್ ಅವರ 36 ವರ್ಷಗಳ ಹಳೆಯ ದಾಖಲೆಯನ್ನು ಎಡ್ವರ್ಡ್ಸ್ ಮುರಿದಿದ್ದಾರೆ. ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದಿದ್ದ ಅವರು, 78 ರನ್ ಸಿಡಿಸಿ ಮಿಂಚು ಹರಿಸಿದ್ದು ಮಾತ್ರವಲ್ಲದೇ ತಂಡದ ಗೆಲುವಿನಲ್ಲೂ ಮಹತ್ವದ ಪಾತ್ರ ವಹಿಸಿದ್ದಾರೆ.
ಹಿಮಾಚಲ ಪ್ರದೇಶದ ಧರ್ಮಶಾಲಾ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ವಿಶ್ವಕಪ್ 15ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ನೆದರ್ಲ್ಯಾಂಡ್ಸ್ 38 ರನ್‌ಗಳಿಂದ ಮಣಿಸಿದೆ. ಈ ಮೂಲಕ ಸ್ಕಾಟ್ ಎಡ್ವರ್ಡ್ಸ್ ನೇತೃತ್ವದ ಡಚ್ ತಂಡವು ಅಚ್ಚರಿ ಫಲಿತಾಂಶವನ್ನು ನೀಡಿ ಕ್ರಿಕೆಟ್ ಅಭಿಮಾನಿಗಳು ಹುಬ್ಬೇರಿಸುವಂತೆ ಮಾಡಿದೆ. ಜೊತೆಗೆ ಮೂರು ದಿನಗಳ ಅಂತರದಲ್ಲಿ ಎರಡನೇ ಅಚ್ಚರಿ ಫಲಿತಾಂಶಕ್ಕೆ 2023ನೇ ವಿಶ್ವಕಪ್ ಟೂರ್ನಿ ಸಾಕ್ಷಿಯಾಗಿದೆ. ಭಾನುವಾರ ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡಕ್ಕೆ ಅಫ್ಘಾನಿಸ್ತಾನ ತಂಡವನ್ನು ಸೋಲುಣಿಸಿತ್ತು. ಮಂಗಳವಾರ ತೆಂಬಾ ಬಾವುಮಾ ನಾಯಕತ್ವದ ಬಲಾಢ್ಯ ದಕ್ಷಿಣ ಆಫ್ರಿಕಾ ತಂಡಕ್ಕೆ ಡಚ್ಚರು ಶಾಕ್ ಕೊಟ್ಟು ಗಮನ ಸೆಳೆದಿದ್ದಾರೆ.
ಮಳೆಯಿಂದಾಗಿ 43 ಓವರ್ಗಳಿಗೆ ಕಡಿತಗೊಂಡಿದ್ದ ಈ ಪಂದ್ಯದ ಗೆಲುವಿನಲ್ಲಿ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಆಗಿರುವ ನಾಯಕ ಸ್ಕಾಟ್ ಎಡ್ವರ್ಡ್ಸ್ ಮಹತ್ವದ ಪಾತ್ರ ವಹಿಸಿದ್ದಾರೆ. ದಕ್ಷಿಣ ಆಫ್ರಿಕಾದ ಗಟ್ಟಿ ಬೌಲಿಂಗ್ ನಡುವೆಯೂ ದೃಢವಾಗಿ ನಿಂತ ಎಡ್ವರ್ಡ್ಸ್ 78 ರನ್ಗಳನ್ನು ಬಾರಿಸಿದ್ದರು. ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದಿದ್ದ ನೆದರ್ಲ್ಯಾಂಡ್ಸ್ ತಂಡ ಹರಿಣಗಳ ದಾಳಿಗೆ ಆರಂಭದಲ್ಲಿ ತತ್ತರಿಸಿತ್ತು. ಒಂದು ಹಂತದಲ್ಲಿ ತಂಡದ ಮೊತ್ತ 82 ರನ್ಗಳು ಆಗುವಷ್ಟರಲ್ಲಿ ಐದು ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡಿತ್ತು. ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ನಾಯಕ ಎಡ್ವರ್ಡ್ಸ್ ತಂಡಕ್ಕೆ ಬಲ ತುಂಬಿ 8 ವಿಕೆಟ್ ನಷ್ಟಕ್ಕೆ 245 ರನ್ಗಳ ಸ್ಪರ್ಧಾತ್ಮಕ ಗುರಿ ನೀಡುವಲ್ಲಿ ಯಶಸ್ವಿಯಾದರು.