ಜೋಹಾನ್ಸ್‌ಬರ್ಗ್ (ದಕ್ಷಿಣ ಆಫ್ರಿಕಾ): ಟಿ20 ವಿಶ್ವಕಪ್ನಲ್ಲಿ ಭಾರತ ಗೆಲುವು ಸಾಧಿಸಬೇಕಾದಲ್ಲಿ ನಿಯಂತ್ರಿತ ಬೌಲಿಂಗ್ ಪ್ರದರ್ಶನ ಅಗತ್ಯ ಇದೆ. ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಬೌಲರ್ಗಳು ದಾರಾಳವಾಗಿ ರನ್ ಬಿಟ್ಟುಕೊಟ್ಟದ್ದು ತಂಡದ ಸೋಲಿನ ಪ್ರಮುಖ ಕಾರಣವಾಗಿದೆ. ವಿಶ್ವಕಪ್ಗೂ ಮುನ್ನ ಟೀಮ್ ಇಂಡಿಯಾ ಈ ತಪ್ಪನ್ನು ಸರಿ ಪಡಿಸಿಕೊಳ್ಳಲು ಹೊಸ ತಂತ್ರವನ್ನು ಹೆಣೆಯಬೇಕಿದೆ.
ಭರವಸೆಯ ಯುವ ಬೌಲರ್ಗಳಾದ ಎಡಗೈ ವೇಗಿ ಅರ್ಶದೀಪ್ ಸಿಂಗ್ ಮತ್ತು ಬಲಗೈ ವೇಗಿ ಮುಖೇಶ್ ಕುಮಾರ್ ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ರೀಜಾ ಹೆಂಡ್ರಿಕ್ಸ್ ಅವರಿಗೆ ಪ್ರತಿ ಓವರ್‌ಗೆ 15.50 ಮತ್ತು 11.33ರ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ. ಒಂದು ದಿನದ ಅಂತರದಲ್ಲಿ ಈ ರನ್ ಹರಿವಿನ ಕಡಿವಾಣದ ತಂತ್ರವನ್ನು ಮುಖ್ಯ ಕೋಚ್ ದ್ರಾವಿಡ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಕಂಡು ಹಿಡಿಯಬೇಕಿದೆ. ಮಳೆ ಮತ್ತು ಇಬ್ಬನಿಯ ಪರಿಣಾಮ ಭಾರತೀಯ ಬೌಲಿಂಗ್ಗೆ ಮೈದಾನ ಸಹಕಾರಿ ಆಗಿರಲಿಲ್ಲ ಎಂಬುದು ಕಾರಣ ಆಗಿರಬಹುದು, ಆದರೆ ಬೌಲರ್ಗಳು ಲಯ ಕಂಡುಕೊಳ್ಳುವಲ್ಲಿ ಎಡವಿದ್ದಾರೆ.
ಆಸ್ಟ್ರೇಲಿಯಾದ ವಿರುದ್ಧ ಭಾರತ ಸರಣಿಯನ್ನು 4-1 ರಿಂದ ಗೆದ್ದುಕೊಂಡಿತಾದರೂ, ತವರಿನ ಪಿಚ್ನ ಸಹಾಯದ ನಡುವೆಯೂ ಬೌಲಿಂಗ್ನಲ್ಲಿ ಹಲವಾರು ಎಡವಟ್ಟುಗಳನ್ನು ಮಾಡಿಕೊಂಡಿತ್ತು. ವಿಶ್ವಕಪ್ಗೂ ಮುನ್ನ ಅನುಭವಿ ಜಸ್ಪ್ರೀತ್ ಬುಮ್ರಾ ಅವರ ಪರ್ಯಾಯವಾಗಿ ಅರ್ಶದೀಪ್ ಮತ್ತು ಮುಖೇಶ್ ಅವರನ್ನು ಬೆಳೆಸಲು ಪ್ರಯತ್ನಿಸುತ್ತಿದೆ. ಆದರೆ ನಿರೀಕ್ಷಿತ ಯಶಸ್ಸು ಈ ಇಬ್ಬರು ಬೌಲರ್ಗಳಿಂದ ಬರುತ್ತಿಲ್ಲ.
ಸ್ಪಿನ್ ಬೌಲಿಂಗ್ ವಿಭಾಗವೂ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಒಂದು ವರ್ಷ ಮತ್ತು ನಾಲ್ಕು ತಿಂಗಳ ವಿರಾಮದ ನಂತರ ಟಿ20I ಆಡಿದ ರವೀಂದ್ರ ಜಡೇಜಾ ಕೂಡ ಸೇಂಟ್ ಜಾರ್ಜ್ ಪಾರ್ಕ್‌ನಲ್ಲಿ ಪ್ರಭಾವಶಾಲಿ ಆಗಿರಲಿಲ್ಲ. ಭಾರತದ ಉಪನಾಯಕ ಜಡೇಜಾ ಅವರು ಮೂರನೇ ಪಂದ್ಯಕ್ಕೆ ಹೊರಗುಳಿಯುವ ಸಾಧ್ಯತೆ ಇದೆ. ಆಸ್ಟ್ರೇಲಿಯಾ ವಿರುದ್ಧ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ರವಿ ಬಿಷ್ಣೋಯ್ಗೆ ಅವಕಾಶ ನಿರೀಕ್ಷೆ ಇದೆ.