ಪರ್ಲ್(ದಕ್ಷಿಣ ಆಫ್ರಿಕಾ): ದಕ್ಷಿಣ ಆಫ್ರಿಕಾದ ವಿರುದ್ಧದ ಏಕದಿನ ಸರಣಿ ಸಮಬಲವಾಗಿದೆ. ಗುರುವಾರ ನಡೆಯಲಿರುವ ಮೂರನೇ ಪಂದ್ಯವು ಪ್ರಶಸ್ತಿ ಗೆಲುವಿಗೆ ಪ್ರಮುಖ ಹಣಾಹಣಿಯಾಗಿದೆ. 2018ರ ನಂತರ ಹರಿಣಗಳ ನಾಡಿನಲ್ಲಿ ಸರಣಿ ಗೆಲ್ಲಲು ಮತ್ತು 2022ರ ಕ್ಲೀನ್ ಸ್ವೀಪ್ ಸೇಡು ತೀರಿಸಿಕೊಳ್ಳುವ ಉತ್ಸಾಹದಲ್ಲಿದೆ ರಾಹುಲ್ ಪಡೆ.
ಮೂರನೇ ಪಂದ್ಯದಲ್ಲಿ ಯಶಸ್ಸು ಸಾಧಿಸಲು ಟೀಮ್ ಇಂಡಿಯಾ ಉತ್ತಮ ಆರಂಭ ಪಡೆಯುವುದು ಅಗತ್ಯ. ಮೊದಲ ಪಂದ್ಯದಲ್ಲಿ ಭಾರತ ಜಯ ದಾಖಲಿಸಿತಾದರೂ ಉತ್ತಮ ಆರಂಭ ಬರಲಿಲ್ಲ. ಎರಡನೇ ಪಂದ್ಯದಲ್ಲೂ ಅದೇ ಮರುಕಳಿಸಿತು. ಮೊದಲ ವಿಕೆಟ್ಗೆ ದೊಡ್ಡ ಜೊತೆಯಾಟ ಮೂಡಿಬರದ ಕಾರಣ ಬೃಹತ್ ಮೊತ್ತ ಕಲೆಹಾಕುವಲ್ಲಿ ತಂಡ ಎಡವುತ್ತಿದೆ.
ಗಾಯಕ್ವಾಡ್ ವೈಫಲ್ಯ: ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ರನ್ ಗಳಿಸಲು ಪರದಾಡುತ್ತಿದ್ದಾರೆ. ಮೊದಲ ಪಂದ್ಯದಲ್ಲಿ 5 ರನ್ಗೆ ವಿಕೆಟ್ ಕೊಟ್ಟರೆ, ಎರಡನೇ ಪಂದ್ಯದಲ್ಲಿ 4 ರನ್ಗೆ ಔಟ್ ಆದರು. ಮೊದಲ ಪಂದ್ಯದಲ್ಲಿ ಭಾರತ 23 ರನ್ನ ಮೊದಲ ವಿಕೆಟ್ ಜೊತೆಯಾಟ ಪಡೆದರೆ, ಎರಡನೇ ಪಂದ್ಯದಲ್ಲಿ 4 ರನ್ ಜೊತೆಯಾಟ ಮಾತ್ರ ಕಂಡಿತು. ಗಾಯಕ್ವಾಡ್ ಬ್ಯಾಟಿಂಗ್ ವೈಫಲ್ಯ ತಂಡಕ್ಕೆ ಕಾಡುತ್ತಿದೆ.
ಪಾಟಿದಾರ್ ಪಾದಾರ್ಪಣೆ?:ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಪಾದಾರ್ಪಣೆ ಮಾಡಿದ ತಿಲಕ್ ವರ್ಮಾ ದಕ್ಷಿಣ ಆಫ್ರಿಕಾದಲ್ಲಿ ಸಹ ಕ್ಲಿಕ್ ಆಗಿಲ್ಲ. ಹೀಗಾಗಿ ಗಾಯಕ್ವಾಡ್ ಮತ್ತು ತಿಲಕ್ ವರ್ಮಾಗೆ ನಾಳಿನ ಪಂದ್ಯಕ್ಕೆ ಕೊಕ್ ಸಿಗಲಿದೆಯಾ ಎಂಬ ಪ್ರಶ್ನೆ ಕಾಡುತ್ತಿದೆ. ತಂಡಕ್ಕೆ ಈ ಹಿಂದೆ ಆಯ್ಕೆಯಾದರೂ ಪಾದಾರ್ಪಣೆ ಅವಕಾಶದಿಂದ ವಂಚಿತರಾಗಿದ್ದ ರಜತ್ ಪಾಟಿದಾರ್ ನಾಳಿನ ಪಂದ್ಯದಲ್ಲಿ ಚೊಚ್ಚಲ ಕರೆ ಪಡೆಯುವ ಸಾಧ್ಯತೆ ಇದೆ. ಆದರೆ ಪಾಟಿದಾರ್ ದೇಶೀಯ ಕ್ರಿಕೆಟ್ನಲ್ಲಿ 4ನೇ ಸ್ಥಾನದಲ್ಲಿ ಆಡುತ್ತಾರೆ. ಹೀಗಾಗಿ ಅವರ ಅವಕಾಶ ಗೊಂದಲಕ್ಕೆ ಕಾರಣವಾಗಿದೆ. ಶ್ರೇಯಸ್ ಅಯ್ಯರ್ ಮೊದಲ ಏಕದಿನದ ನಂತರ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ಅಭ್ಯಾಸದಲ್ಲಿ ತೊಡಗಿದ್ದಾರೆ. ತಂಡದಲ್ಲಿ ಬೇರೆ ಆಯ್ಕೆಗಳಿಲ್ಲದಿರುವುದರಿಂದ ನಾಯಕ ರಾಹುಲ್ ಪಾಟಿದಾರ್ಗೆ ಒಂದು ಅವಕಾಶ ನೀಡುವ ಸಾಧ್ಯತೆ ಇದೆ.
ಸಂಜು ಸ್ಥಾನ ಅಸ್ತಿರ: ಸಂಜು ಸ್ಯಾಮ್ಸನ್ಗೆ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಸಿಗಲೇ ಇಲ್ಲ. ಎರಡನೇ ಪಂದ್ಯದಲ್ಲಿ ತಂಡಕ್ಕೆ ಅಗತ್ಯ ಇದ್ದಾಗ 23 ಬಾಲ್ ಆಡಿ ಕೇವಲ 12 ರನ್ ಗಳಿಸಿ ವಿಕೆಟ್ ಕೊಟ್ಟರು. ಈಗ ಮೂರನೇ ಪಂದ್ಯದಲ್ಲಿ ಅವರ ಸ್ಥಾನ ಅಸ್ಥಿರವಾಗಿದೆ. ಎರಡನೇ ಏಕದಿನದಲ್ಲಿ ಅವರಿಗೆ ರಾಹುಲ್ ಕೀಪರ್ ಸ್ಥಾನವನ್ನು ಬಿಟ್ಟುಕೊಟ್ಟಿದ್ದರು. ಮೂರನೇ ಏಕದಿನದಲ್ಲೂ ಸಂಜು ಕೀಪರ್ ಆಗಿ ಮುಂದುವರೆದರೆ ಅವಕಾಶ ಇರಲಿದೆ.