ಕೇಪ್ ಟೌನ್(ದಕ್ಷಿಣ ಆಫ್ರಿಕಾ): ಮೊದಲ ಟೆಸ್ಟ್‌ನಲ್ಲಿ ಇನಿಂಗ್ಸ್ ಸೋಲಿನ ನಂತರ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆಲುವಿನ ಕನಸು ನನಸಾಗಿಲ್ಲ. ಹೀಗಿದ್ದರೂ, ಬುಧವಾರದಿಂದ ಇಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್‌ನಲ್ಲಿ ಭಾರತ ತಂಡವು ಸರಣಿ ಸಮಬಲಗೊಳಿಸುವ ಗುರಿ ಹೊಂದಿದೆ. ಆದರೆ, ವಿಶ್ವದ ಅತ್ಯಂತ ರಮಣೀಯ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ಭಾರತದ ಇತಿಹಾಸ ಕಳಪೆಯಾಗಿದೆ. ಇಲ್ಲಿ ಆಡಿದ ಆರು ಟೆಸ್ಟ್ಗಳಲ್ಲಿ ಸೋಲು ಕಂಡಿದೆ.
ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ದಕ್ಷಿಣ ಆಫ್ರಿಕಾದ ಅಸಾಧಾರಣ ಬೌಲಿಂಗ್ ದಾಳಿಯ ವಿರುದ್ಧ ಭಾರತೀಯರು ತತ್ತರಿಸಿ ಹೋದರು. ಸೆಂಚುರಿಯನ್‌ನಲ್ಲಿ ಗಾಯಕ್ಕೆ ತುತ್ತಾಗಿ ವೇಗಿ ಜೆರಾಲ್ಡ್ ಕೊಯೆಟ್ಜಿ ಕೇಪ್ ಟೌನ್ ಟೆಸ್ಟ್ನಿಂದ ಹೊರಗುಳಿದಿರುವುದು ಭಾರತಕ್ಕೆ ಲಾಭವಾಗುವ ಸಾಧ್ಯತೆ ಇದೆ. ಆದರೆ ಸೆಂಚುರಿಯನ್‌ನಲ್ಲಿ ಬೆಂಕಿ ಚೆಂಡುಗಳ ದಾಳಿ ನಡೆಸಿದ ಎಡಗೈ ವೇಗಿ ನಾಂದ್ರೆ ಬರ್ಗರ್ ಮತ್ತು ಬಲಗೈ ವೇಗಿ ಕಗಿಸೊ ರಬಾಡ ಮತ್ತೊಮ್ಮೆ ಕೇಪ್ ಟೌನ್‌ನಲ್ಲಿ ಕಠಿಣ ಸವಾಲಾಗಲಿದ್ದಾರೆ. ಇಲ್ಲಿನ ವಿಕೆಟ್ ಸಹ ವೇಗಿಗಳಿಗೆ ಸಹಕಾರಿ ಆಗುವ ರೀತಿಯಲ್ಲೇ ಇದೆ. ಈ ಇಬ್ಬರು ವೇಗಿಗಳಿಗೆ ಲುಂಗಿ ಎನ್‌ಗಿಡಿ ಬೌಲಿಂಗ್ ಹರಿಣಗಳಿಗೆ ಬಲ ತುಂಬಲಿದೆ.
ಕೆ.ಎಲ್.ರಾಹುಲ್ ಹೊರತುಪಡಿಸಿ, ಉಳಿದೆಲ್ಲಾ ಬ್ಯಾಟರ್ಗಳು ಮೊದಲ ಟೆಸ್ಟ್‌ನಲ್ಲಿ ಹೀನಾಯವಾಗಿ ಪ್ರದರ್ಶನ ನೀಡಿದರು. ರಾಹುಲ್ ದ್ರಾವಿಡ್ ತರಬೇತಿ ಅಡಿಯಲ್ಲಿ ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಅಬ್ಬರಿಸಿದರೆ ಸರಣಿ ಸಮಬಲದ ಕನಸು ನನಸಾಗಲಿದೆ.
ಏಕದಿನ ವಿಶ್ವಕಪ್ನಲ್ಲಿ ಅದ್ಭುತ ಫಾರ್ಮ್ನಲ್ಲಿದ್ದ ವಿರಾಟ್, ಮೊದಲ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಅರ್ಧಶತಕ ಗಳಿಸಿದರು. ಎರಡನೇ ಟೆಸ್ಟ್‌ನಲ್ಲಿ ಅದೇ ಇನ್ನಿಂಗ್ಸ್ ಅನ್ನು ವಿರಾಟ್ ಮುಂದುವರೆಸುತ್ತಾರೆ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ಕೆಎಲ್ ರಾಹುಲ್ ಮೊದಲ ಟೆಸ್ಟ್‌ನಲ್ಲಿ ಬ್ಯಾಟಿಂಗ್ನಲ್ಲಿ ಶತಕ ಗಳಿಸಿ ಮಿಂಚಿದ್ದಲ್ಲದೇ ಕ್ಷೇತ್ರ ರಕ್ಷಣೆ ವೇಳೆ ಕೈಗವಸು ತೊಟ್ಟು ವಿಕೆಟ್ ಕೀಪರ್ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.
ಭಾರತದ ಬೌಲಿಂಗ್ ಆತಂಕ: ಹರಿಣಗಳ ನಾಡಿನಲ್ಲಿ ವೇಗಿಗಳು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಮೊದಲ ಇನ್ನಿಂಗ್ಸ್ನಲ್ಲಿ ಎದುರಾಳಿ ತಂಡ ಆಲೌಟ್ಗೆ ಶರಣಾದರೂ 400ಕ್ಕೂ ಹೆಚ್ಚು ರನ್ ಗಳಿಸುವಲ್ಲಿ ಯಶಸ್ವಿ ಆಗಿತ್ತು. ಕಳೆದ ಪಂದ್ಯದಲ್ಲಿ ಚೊಚ್ಚಲ ಅವಕಾಶವನ್ನು ಪಡೆದುಕೊಂಡಿದ್ದ, ಕನ್ನಡಿಗ ಪ್ರಸಿದ್ಧ್ ಕೃಷ್ಣ ಈ ಪಂದ್ಯದಲ್ಲಿ ಹೊರಗುಳಿಯುವ ಸಾಧ್ಯತೆ ಇದೆ. ಅವರ ಸ್ಥಾನದಲ್ಲಿ ಮಧ್ಯಪ್ರದೇಶದ ಸೀಮರ್ ಅವೇಶ್ ಖಾನ್ ತಮ್ಮ ಟೆಸ್ಟ್ ಪಾದಾರ್ಪಣೆ ಪಂದ್ಯ ಆಡುವ ನಿರೀಕ್ಷೆ ಇದೆ.
ಸ್ಪಿನ್ ವಿಭಾಗದಲ್ಲೂ ಅಶ್ವಿನ್ ಬದಲಾಗಿ ಜಡೇಜ ಕಣಕ್ಕಿಳಿಯುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಗಂಟೆಗೆ 100 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡುವ ಜಡೇಜ ಸ್ಪಿನ್ ಜೊತೆಗೆ ಕಮಾಲ್ ಮಾಡುವ ನಿರೀಕ್ಷೆ ಇದೆ. ಬೆನ್ನು ನೋವಿನ ಕಾರಣಕ್ಕೆ ಜಡೇಜ ಮೊದಲ ಪಂದ್ಯ ತಪ್ಪಿಸಿಕೊಂಡಿದ್ದರು.