ಗ್ಕೆಬರ್ಹಾ (ದಕ್ಷಿಣ ಆಫ್ರಿಕಾ):2024ರ ಟಿ20 ವಿಶ್ವಕಪ್ ತಯಾರಿ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವೆ 3 ಪಂದ್ಯಗಳ ಸರಣಿ ನಡೆಯುತ್ತಿದೆ. ಮೊದಲ ಪಂದ್ಯ ಮಳೆಗೆ ಆಹುತಿ ಆಯುತು. ತುಂತುರು ಮಳೆ ಮತ್ತು ಮೋಡದ ನಡುವೆಯೇ ಎರಡನೇ ಪಂದ್ಯದ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್ ಆಯ್ದುಕೊಂಡಿದೆ.
ಆಸ್ಟ್ರೇಲಿಯಾ ಸರಣಿಯ ವೇಳೆ ವಿಶ್ರಾಂತಿಯಲ್ಲಿದ್ದ ಶುಭಮನ್ ಗಿಲ್ ತಂಡಕ್ಕೆ ಮರಳುತ್ತಿದ್ದಂತೆ ಆಡುವ ಬಳಗಕ್ಕೆ ಪ್ರವೇಶ ಪಡೆದುಕೊಂಡಿದ್ದಾರೆ. ರುತುರಾಜ್ ಗಾಯಕ್ವಾಡ್ ಅವರನ್ನು ಕೈಬಿಡಲಾಗಿದೆ. ಆಸ್ಟ್ರೇಲಿಯಾ ವಿರುದ್ಧ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ರವಿ ಬಿಷ್ಣೋಯ್ ಕೈಬಿಟ್ಟು ಉಪನಾಯಕ ರವೀಂದ್ರ ಜಡೇಜಾ ಎರಡನೇ ಸ್ಪಿನ್ನರ್ ಆಗಿ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.
ಏಕದಿನ ವಿಶ್ವಕಪ್ನಲ್ಲಿ ಆಡಿದ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ಗೆ ಅವಕಾಶ ಸಿಕ್ಕಿಲ್ಲ. ಮೂರನೇ ಸ್ಥಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಎರಡು ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಆಡಿದ್ದರು. ಕೊನೆಯ ಪಂದ್ಯದಲ್ಲಿ ಅರ್ಧಶತಕವನ್ನೂ ದಾಖಲಿಸಿದ್ದರು. ಆದರೆ ಅವರನ್ನು ಕೈಬಿಟ್ಟು, ವೆಸ್ಟ್ ಇಂಡೀಸ್ ವಿರುದ್ಧ ಪಾದಾರ್ಪಣೆ ಮಾಡಿದ ತಿಲಕ್ ವರ್ಮಾಗೆ ಅವಕಾಶ ಸಿಕ್ಕಿದೆ. ವಿಕೆಟ್ ಕೀಪರ್ ಸ್ಥಾನದಲ್ಲಿ ಜಿತೇಶ್ ಶರ್ಮಾ ತವರಿನ ಟಿ20 ಸರಣಿಯ ನಂತರ ಮುಂದುವರೆದಿದ್ದಾರೆ.