ಗ್ಕೆಬರ್ಹಾ (ದಕ್ಷಿಣ ಆಫ್ರಿಕಾ): ಶೂನ್ಯಕ್ಕೆ ಆರಂಭಿಕ ಆಟಗಾರರಿಬ್ಬರು ವಿಕೆಟ್ ಒಪ್ಪಿಸಿದ ನಂತರ ರಿಂಕು ಸಿಂಗ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಅವರ ಅಬ್ಬರ ಇನ್ನಿಂಗ್ಸ್ ಬಲದಿಂದ ಟೀಮ್ ಇಂಡಿಯಾ ಸೇಂಟ್ ಜಾರ್ಜ್ ಪಾರ್ಕ್ ಮೈದಾನದಲ್ಲಿ ಮಳೆ ಆರಂಭಕ್ಕೂ ಮುನ್ನ 19.3 ಓವರ್ಗೆ 7 ವಿಕೆಟ್ ಕಳೆದುಕೊಂಡು 180 ರನ್ ಕಲೆಹಾಕಿದೆ. ಟಾಸ್ಗೂ ಮುನ್ನ ಮಳೆಯ ಮುನ್ಸೂಚನೆ ಇತ್ತಾದರೂ ನಂತರ ವರುಣ ಆಟಕ್ಕೆ ಅವಕಾಶ ಮಾಡಿಕೊಟ್ಟದ್ದ. ಆದರೆ, 19.3ನೇ ಓವರ್ ವೇಳೆಗೆ ದಿಢೀರನೇ ಮಳೆ ಬಂದ ಕಾರಣ ಪಂದ್ಯವನ್ನು ನಿಲ್ಲಿಸಲಾಗಿದೆ.
2024ರ ಟಿ20 ವಿಶ್ವಕಪ್ಗೆ ತಯಾರಿ ಎಂಬುದು ಆಟಗಾರರ ಮನಸ್ಸಿನಲ್ಲಿ ಅಚ್ಛಾಗಿದೆ ಎಂದರೆ ತಪ್ಪಾಗದು. ಏಕೆಂದರೆ ಆಟಗಾರರಿಗೆ ಅಂತಾರಾಷ್ಟ್ರೀಯ ಟಿ20ಯಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡು ತಂಡದಲ್ಲಿ ಸ್ಥಾನ ಪಡೆದುಕೊಳ್ಳಬೇಕಿದೆ. ಹೀಗಿರುವಾಗ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಇರುವ ಸೀಮಿತ ಅವಕಾಶದಲ್ಲಿ ಬಳಸಿಕೊಳ್ಳಬೇಕಿದೆ.
ಮೊದಲ ಪಂದ್ಯ ಮಳೆಗೆ ಆಹುತಿ ಆದ ನಂತರ ಎರಡನೇ ಪಂದ್ಯವೂ ವರುಣನ ಪಾಲಾಗುತ್ತದೆ ಎಂಬಂತೆ ಪಂದ್ಯಾರಂಭಕ್ಕೆ 40 ನಿಮಿಷ ಮುಂಚೆ ಮಳೆ ಬಂದಿತ್ತು. ಆದರೆ, ಮಳೆ ಬಿಡುವು ಕೊಟ್ಟ ಕಾರಣ ಪಂದ್ಯ ಆರಂಭವಾಯಿತು. ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ಭಾರತದ ಆರಂಭಿಕ ಬ್ಯಾಟರ್ಗಳಾದ ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್ ಗಿಲ್ ಡಕ್ ಆಗಿ ಪೆವಿಲಿಯನ್ ಹಾದಿ ಹಿಡಿದರು. ಆದರೆ ಮೂರನೇ ವಿಕೆಟ್ಗೆ ಒಂದಾದ ತಿಲಕ್ ವರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಜೋಡಿ 49 ರನ್ಗಳ ಪಾಲುದಾರಿಕೆ ಮಾಡಿ ತಂಡಕ್ಕೆ ಆಸರೆ ಆದರು. ತಿಲಕ್ ವರ್ಮಾ ತಮ್ಮ ಟಿ-20ಯ ಅಬ್ಬರದ ಬ್ಯಾಟಿಂಗ್ ಶೈಲಿಯನ್ನು ದಕ್ಷಿಣ ಆಫ್ರಿಕಾದಲ್ಲೂ ಮುಂದುವರೆಸಿದ್ದಲ್ಲದೇ ನಾಯಕ ಸೂರ್ಯಗೆ ಸಾಥ್ ನೀಡಿದರು. 20 ಬಾಲ್ ಆಡಿದ ತಿಲಕ್ 4 ಬೌಂಡರಿ, 1 ಸಿಕ್ಸ್ನಿಂದ 29 ರನ್ ಸೇರಿಸಿ ಔಟ್ ಆದರು.