ಕರ್ನಾಟಕ

karnataka

ETV Bharat / sports

ಟಿ20 ವಿಶ್ವಕಪ್​​ ತಯಾರಿಗೆ ಮಳೆ ಆತಂಕ: ಹರಿಣಗಳ ವಿರುದ್ಧ ನಡೆಯುತ್ತಾ ಎರಡನೇ ಪಂದ್ಯ?

RSA vs IND 2nd T20: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಮಳೆಯ ಪಾಲಾಯಿತು, ಎರಡನೇ ಪಂದ್ಯಕ್ಕೆ ಉಭಯ ತಂಡಗಳು ಸಜ್ಜಾಗಿದ್ದು, ವಿಶ್ವಕಪ್​ ತಯಾರಿ ಮ್ಯಾಚ್​ನಲ್ಲಿ ಗೆಲುವು ಯಾರಿಗೆ?

South Africa vs India 2nd T20I Preview
South Africa vs India 2nd T20I Preview

By ETV Bharat Karnataka Team

Published : Dec 11, 2023, 10:45 PM IST

ಗ್ಕೆಬರ್ಹಾ (ದಕ್ಷಿಣ ಆಫ್ರಿಕಾ): ಸರಣಿ - ಆರಂಭಿಕ ಪಂದ್ಯ ಮಳೆಗೆ ವಾಶ್ಔಟ್‌ನ ನಂತರ ವಿಶ್ವಕಪ್​​ಗೂ ಮುನ್ನ ಭಾರತಕ್ಕೆ ತಯಾರಿಗೆ ಕೇವಲ 5 ಅಂತಾರಾಷ್ಟ್ರೀಯ ಪಂದ್ಯಗಳು ಉಳಿದಿವೆ. ಎರಡನೇ ಟಿ20 ಪಂದ್ಯಕ್ಕೂ ಮಳೆಯ ಆತಂಕ ಇದ್ದು, ಪಂದ್ಯ ನಡೆಯುವ ಸಾದ್ಯತೆ ಲೆಕ್ಕಹಾಕಲಾಗುತ್ತಿದೆ. ಹೀಗಾಗಿ, ಉಭಯ ತಂಡಗಳಿಗೆ ಸರಣಿ ಗೆಲುವಿನ ಒತ್ತಡ ಹೆಚ್ಚಾಗಿದೆ.

ಜೂನ್​ನಲ್ಲಿ ನಡೆಯುವ 2024ರ ಟಿ20 ವಿಸ್ವಕಪ್​​ಗೂ ಮುನ್ನ ಅಭ್ಯಾಸದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಪಂದ್ಯವನ್ನಾಡಲು ಹೆಚ್ಚಿನ ಅವಕಾಶಗಳಿಲ್ಲ. ಭಾರತಕ್ಕೆ ದಕ್ಷಿಣ ಆಫ್ರಿಕಾ ಸರಣಿಯ ನಂತರ ತವರಿನಲ್ಲಿ ಅಫ್ಘನ್​ ವಿರುದ್ಧ 3 ಪಂದ್ಯಗಳ ಟಿ20 ಸರಣಿ ಮಾತ್ರ ಬಾಕಿ ಇದೆ. ಹೀಗಾಗಿ ತಂಡದಲ್ಲಿ ಹೆಚ್ಚಿನ ಪ್ರಯೋಗಗಳನ್ನು ಮಾಡುವುದು ಅಸಾಧ್ಯವಾಗಿದೆ. ಆದರೆ, ವಿಶ್ವಕಪ್​​ಗೂ ಮುನ್ನ ಭಾರತದಲ್ಲಿ ನಡೆಯುವ ಇಂಡಿಯನ್​ ಪ್ರೀಮಿಯರ್​ ಲೀಗ್​ ಹೆಚ್ಚಿನ ರಾಷ್ಟ್ರದ ಆಟಗಾರರಿಗೆ ತಯಾರಿ ಭಾಗವಾಗಲಿದೆ.

ದಕ್ಷಿಣ ಆಫ್ರಿಕಾ ಪ್ರವಾಸದ ಮೂರು ಟಿ20 ಪಂದ್ಯಕ್ಕೆ ಆಯ್ಕೆದಾರರು 17 ಮಂದಿಯ ತಂಡವನ್ನು ಘೋಷಿಸಿದ್ದಾರೆ. ಉಳಿದ ಎರಡು ಪಂದ್ಯಗಳಲ್ಲಿ ಅವರೆಲ್ಲರಿಗೂ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಇದೆ. ಆದರೆ, ವಿಶ್ವಕಪ್​ ತಂಡ ಆಯ್ಕೆಯ ಪ್ರಮುಖ ಪಟ್ಟಿಯಲ್ಲಿ ಏಕದಿನ ವಿಶ್ವಕಪ್​ ಆಡಿದ ಶುಭಮನ್​ ಗಿಲ್​, ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ನಾಯಕತ್ವ ವಹಿಸಿದ ಸೂರ್ಯಕುಮಾರ್​ ಯಾದವ್​ ಮತ್ತು ಅದೇ ಸರಣಿಯಲ್ಲಿ ಮಿಂಚಿದ ರಿಂಕು ಸಿಂಗ್ ಸ್ಥಾನ ಹೆಚ್ಚು ಕಡಿಮೆ ಪಕ್ಕಾ ಆಗಿದೆ.

ಯಶಸ್ವಿ ಜೈಸ್ವಾಲ್ ಮತ್ತು ರುತುರಾಜ್ ಗಾಯಕ್ವಾಡ್ ಸ್ಥಾನ ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಆಡುತ್ತಾರಾ ಎಂಬುದರ ಮೇಲೆ ನಿರ್ಧರಿತವಾಗಲಿದೆ. ಐಪಿಎಲ್​ನಲ್ಲಿ ಈ ಯುವ ಪ್ರತಿಭೆಗಳು ಅನುಭವಿ ಆಟಗಾರರನ್ನು ಮೀರಿಸಿ ಪ್ರದರ್ಶನ ನೀಡಿ, ಆಯ್ಕೆದಾರರ ಮೆಚ್ಚುಗೆ ಗಳಿಸಬೇಕಿದೆ. ರಿಂಕು ಅವರಂತೆ ಜಿತೇಶ್ ಶರ್ಮಾ ಕೂಡ ಕೆಳೆ ಕ್ರಮಾಂಕದಲ್ಲಿ ಫಿನಿಶರ್​ ಪಾತ್ರ ನಿರ್ವಹಿಸಬಲ್ಲರು. ಹೀಗಾಗಿ ಇವರಿಬ್ಬರ ಮಧ್ಯೆಯೂ ಸ್ಥಾನದ ಪೈಪೋಟಿ ಇದೆ.

ವಿಶ್ವಕಪ್‌ಗೆ ಮುನ್ನ ಭಾರತ ಆಡುವ ಏಕೈಕ ಸರಣಿ ಮುಂದಿನ ತಿಂಗಳು ಅಫ್ಘಾನಿಸ್ತಾನ ವಿರುದ್ಧ ತವರಿನಲ್ಲಿ ನಡೆಯಲಿದೆ. ವಿಶ್ವಕಪ್‌ಗೆ ಮೊದಲು ಭಾರತದ ಟಿ20 ಸರಣಿಗಳನ್ನು ಆಡುತ್ತಿಲ್ಲ ಎಂಬ ಆರೋಪಕ್ಕೆ ಐಪಿಎಲ್​ನ್ನೇ ಆಯ್ಕೆಯ ಪರಿಗಣನಾ ಅಂಶವಾಗಿಸುವ ಸಾಧ್ಯತೆ ಹೆಚ್ಚಿದೆ.

ಬೌಲಿಂಗ್​ ವಿಭಾಗ:ದಕ್ಷಿಣ ಆಫ್ರಿಕಾದ ಪಿಚ್‌ಗಳಲ್ಲಿನ ಹೆಚ್ಚುವರಿ ಬೌನ್ಸ್ ಯುವ ಬ್ಯಾಟಿಂಗ್ ಲೈನ್‌ಅಪ್‌ಗೆ ಕಠಿಣ ಪರೀಕ್ಷೆ ಒಡ್ಡುತ್ತದೆ. ಬೌಲಿಂಗ್ ವಿಭಾಗದಲ್ಲಿ, ಈ ಸರಣಿ ಆಡುತ್ತಿರುವ ಅರ್ಶದೀಪ್​ ಸಿಂಗ್ ಮತ್ತು ಜಸ್‌ಪ್ರೀತ್ ಬುಮ್ರಾ ಮಾತ್ರ ವಿಶ್ವಕಪ್‌ಗೆ ನೇರ ಆಯ್ಕೆ ಆಗುವ ಸಾಧ್ಯತೆ ಇದೆ. ದೀಪಕ್ ಚಹಾರ್ ಸ್ಥಾನ ಐಪಿಎಲ್​ ಪ್ರದರ್ಶನದಿಂದ ನಿರ್ಧಾರ ಆಗಲಿದೆ.

ಟಿ20 ವಿಶ್ವಕಪ್​ ವೇಳೆಗೆ ಸ್ಪಿನ್ನರ್​​ಗಳಾದ ಕುಲದೀಪ್ ಯಾದವ್, ರವಿ ಬಿಷ್ಣೋಯ್ ಮತ್ತು ಜಡೇಜಾ ನಡುವೆ ಸ್ಪರ್ಧೆ ಇದೆ. ಕುಲದೀಪ್, ರವಿ ಆಸೀಸ್ ವಿರುದ್ಧದ ಟಿ20ಯಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ಈ ಸರಣಿಯಲ್ಲಿ ಉಪನಾಯಕರಾಗಿರುವ ಅನುಭವಿ ರವೀಂದ್ರ ಜಡೇಜಾ ವಿಶ್ವಕಪ್ ರೇಸ್​ನಲ್ಲಿದ್ದಾರೆ.

ಭಾರತದಂತೆಯೇ, ದಕ್ಷಿಣ ಆಫ್ರಿಕಾಕ್ಕೆ ಕೂಡ ವಿಶ್ವಕಪ್‌ಗೆ ಆಟಗಾರರ ಆಯ್ಕೆಗೆ ಇನ್ನು ಕೇವಲ ಐದು ಪಂದ್ಯಗಳನ್ನು ಮಾತ್ರ ಉಳಿದಿದೆ. ವೇಗದ ಜೋಡಿಯಾದ ಮಾರ್ಕೊ ಜಾನ್ಸೆನ್ ಮತ್ತು ಜೆರಾಲ್ಡ್ ಕೊಯೆಟ್ಜಿ ಮೊದಲ ಎರಡು ಪಂದ್ಯಗಳಿಗೆ ಮಾತ್ರ ಆಯ್ಕೆಯಾದರು. ಎರಡನೇ ಟಿ-20 ಪಂದ್ಯದ ನಂತರ ಇಬ್ಬರು ನೇರವಾಗಿ ಟೆಸ್ಟ್​ ತಂಡಕ್ಕೆ ಸೇರಿಕೊಳ್ಳಲಿರುವುದರಿಂದ ಅವರ ಬೌಲಿಂಗ್​ ಪರೀಕ್ಷೆ ನಡೆಸಲು ಹರಿಣಗಳ ನಾಯಕನಿಗೂ ಅವಕಾಶ ಇಲ್ಲ.

ನಾಳಿನ ಪಂದ್ಯಕ್ಕೂ ಮಳೆ ಬಂದಲ್ಲಿ ವಿಶ್ವಕಪ್​ ತಯಾರಿಗೆ ಉಭಯ ತಂಡಕ್ಕೆ ಸಮಸ್ಯೆ ಆಗಲಿದೆ. ಅಲ್ಲದೇ ಈಗ ಎರಡೂ ತಂಡ ಸರಣಿ ಗೆಲುವಿನ ಬಗ್ಗೆ ಚಿಂತಿಸುವುದಕ್ಕಿಂತ ಹೆಚ್ಚು ವಿಶ್ವಕಪ್​​ನ ಆಟಗಾರರ ಆಯ್ಕೆಗೆ ಗಮನ ಹರಿಸುತ್ತಿದೆ.

ತಂಡಗಳು..ಭಾರತ:ಸೂರ್ಯಕುಮಾರ್ ಯಾದವ್ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಜಿತೇಶ್ ಶರ್ಮಾ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಕುಲದೀಪ್ ಯಾದವ್, ಅರ್ಶದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ದೀಪಕ್ ಚಹಾರ್.

ದಕ್ಷಿಣ ಆಫ್ರಿಕಾ: ಏಡೆನ್ ಮಾರ್ಕ್ರಾಮ್ (ನಾಯಕ), ಓಟ್ನಿಯೆಲ್ ಬಾರ್ಟ್‌ಮನ್, ಮ್ಯಾಥ್ಯೂ ಬ್ರೀಟ್ಜ್ಕೆ, ನಾಂಡ್ರೆ ಬರ್ಗರ್, ಜೆರಾಲ್ಡ್ ಕೊಯೆಟ್ಜಿ, ಡೊನೊವನ್ ಫೆರೇರಾ, ರೀಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸೆನ್, ಹೆನ್ರಿಕ್ ಕ್ಲಾಸೆನ್, ಕೇಶವ್ ಮಹಾರಾಜ್, ಡೇವಿಡ್ ಮಿಲ್ಲರ್​​, ಆಂಡಿಲ್ ಫೆಹ್ಲುಕ್ವಾಯೊ, ತಬ್ರೈಜ್ ಶಮ್ಸಿ, ಟ್ರಿಸ್ಟಾನ್ ಸ್ಟಬ್ಸ್ ಮತ್ತು ಲಿಜಾದ್ ವಿಲಿಯಮ್ಸ್.

ಇದನ್ನೂ ಓದಿ:ಐಪಿಎಲ್ 2024 ಹರಾಜು: 77 ಸ್ಥಾನಕ್ಕಾಗಿ 333 ಕ್ರಿಕೆಟಿಗರ ಬಿಡ್, ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ..

ABOUT THE AUTHOR

...view details