ಗ್ಕೆಬರ್ಹಾ (ದಕ್ಷಿಣ ಆಫ್ರಿಕಾ): ಆರಂಭಿಕ ಆಟಗಾರ ಸಾಯಿ ಸುದರ್ಶನ್ ಮತ್ತು ನಾಯಕ ಕೆ ಎಲ್ ರಾಹುಲ್ ಅವರ ಅರ್ಧಶತಕದ ನೆರವಿನಿಂದ ಇಲ್ಲಿನ ಸೇಂಟ್ ಜಾರ್ಜ್ ಪಾರ್ಕ್ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ 46.2 ಓವರ್ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 211 ರನ್ ಕಲೆಹಾಕಿದೆ. ಸರಣಿ ಸಮಬಲ ಸಾಧಿಸಲು ಹರಿಣಗಳು 212 ರನ್ ಗಳಿಸಬೇಕಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಭಾರತ ಉತ್ತಮ ಆರಂಭವನ್ನು ಪಡೆದುಕೊಳ್ಳುವಲ್ಲಿ ವಿಫಲವಾಯಿತು. ಮೊದಲ ಏಕದಿನ ಪಂದ್ಯದ ರೀತಿಯಲ್ಲೇ ರುತುರಾಜ್ ಗಾಯಕ್ವಾಡ್ (4) ಮತ್ತೆ ವೈಫಲ್ಯ ಅನುಭವಿಸಿದರು. ಮೂರನೇ ವಿಕೆಟ್ಗೆ ಬಂದ ತಿಲಕ್ ವರ್ಮಾ ಮೂರನೇ ಆಟಗಾರನಾಗಿ ಶ್ರೇಯಸ್ ಅಯ್ಯರ್ ಸ್ಥಾನವನ್ನು ತುಂಬಲಿಲ್ಲ. ವರ್ಮಾ ಕೇವಲ 10 ರನ್ಗೆ ವಿಕೆಟ್ ಒಪ್ಪಿಸಿದರು.
ತಂಡಕ್ಕೆ ಆಸರೆ ಆದ ಸುದರ್ಶನ್, ರಾಹುಲ್: ಪದಾರ್ಪಣೆ ಪಂದ್ಯದಲ್ಲಿ ಅರ್ಧಶತಕ ಗಳಿಸಿ ಗಮನ ಸೆಳೆದಿದ್ದ ಸಾಯಿ ಸುದರ್ಶನ್ ಎರಡನೇ ಪಂದ್ಯದಲ್ಲೂ ಮತ್ತೊಂದು ಆಕರ್ಷಕ ಅರ್ಧಶತಕ ಗಳಿಸಿದರು. ರಾಹುಲ್ ಮತ್ತು ಸುದರ್ಶನ್ ಜೋಡಿ 68 ರನ್ಗಳ ಪಾಲುದಾರಿಕೆ ಹಂಚಿಕೊಂಡರು. 83 ಬಾಲ್ ಎದುರಿಸಿದ ಸಾಯಿ 7 ಬೌಂಡರಿ ಮತ್ತು 1 ಸಿಕ್ಸ್ನ ಸಹಾಯದಿಂದ 62 ರನ್ ಕಲೆಹಾಕಿದರು.
1000 ಪೂರೈಸಿದ ರಾಹುಲ್: 2023ರ ಏಕದಿನ ಕ್ರಿಕೆಟ್ನಲ್ಲಿ ಸಾವಿರ ರನ್ ಪೂರೈಸಿದ ದಾಖಲೆಯನ್ನು ಕೆಎಲ್ ರಾಹುಲ್ ಮಾಡಿದರು. 2023ರಲ್ಲಿ 1000 ರನ್ ಪೂರೈಸಿದ 4ನೇ ಆಟಗಾರ ಎನಿಸಿಕೊಂಡರು. ಶುಭಮನ್ ಗಿಲ್, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಈಗಾಗಲೇ ಈ ಮೈಲಿಗಲ್ಲು ತಲುಪಿದ್ದಾರೆ. ಹರಿಣಗಳ ಬೌಲಿಂಗ್ನಲ್ಲಿ ಭಾರತ ಬ್ಯಾಟಿಂಗ್ ವೈಫಲ್ಯ ಎದುರಿಸುತ್ತಿರುವಾಗ ನಾಯಕನಾಗಿ ರಾಹುಲ್ ವಿಕೆಟ್ ಕಾಯ್ದುಕೊಂಡು ತಂಡಕ್ಕೆ ಆಸರೆ ಆದರು. 64 ಬಾಲ್ಗಳನ್ನು ಎದುರಿಸಿದ ರಾಹುಲ್ 7 ಬೌಂಡರಿ ಸಹಿತ 56 ರನ್ಗಳಿಸಿ ಔಟ್ ಆದರು.