ಕರ್ನಾಟಕ

karnataka

ETV Bharat / sports

ಸರಣಿ ಗೆಲುವಿನ ಗುರಿಯಲ್ಲಿ ರಾಹುಲ್​: ಪಾಟಿದಾರ್, ರಿಂಕು ಪದಾರ್ಪಣೆ ನಿರೀಕ್ಷೆ - ETV Bharath Kannada news

RSA vs INS 2nd ODI: ಮೊದಲ ಏಕದಿನ ವಶಪಡಿಸಿಕೊಂಡಿರುವ ರಾಹುಲ್​ ಪಡೆ ಸರಣಿ ಗೆದ್ದು 2022ರ ಸೋಲಿನ ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದೆ.

South Africa vs India  2nd ODI Preview
South Africa vs India 2nd ODI Preview

By ETV Bharat Karnataka Team

Published : Dec 18, 2023, 10:57 PM IST

ಗ್ಕೆಬರ್ಹಾ (ದಕ್ಷಿಣ ಆಫ್ರಿಕಾ): ಪ್ರತಿಭಾನ್ವಿತ ರಜತ್ ಪಾಟಿದಾರ್ ಮತ್ತು 6ನೇ ಸ್ಥಾನದ ಡೇರಿಂಗ್​ ಬ್ಯಾಟರ್​​ ರಿಂಕು ಸಿಂಗ್​ ಎರಡನೇ ಏಕದಿನ ಪಂದ್ಯದಲ್ಲಿ ಪದಾರ್ಪಣೆಯ ನಿರೀಕ್ಷೆಯಲ್ಲಿದ್ದಾರೆ. ನಾಯಕ ಕೆ ಎಲ್​ ರಾಹುಲ್​ ಸರಣಿ ವಶ ಪಡಿಸಿಕೊಳ್ಳಲು ತಂತ್ರವನ್ನು ರೂಪಿಸುತ್ತಿದ್ದಾರೆ. ಹರಿಣಗಳ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ವೇಗಿಗಳಾದ ಅರ್ಶದೀಪ್ ಸಿಂಗ್ ಮತ್ತು ಅವೇಶ್ ಖಾನ್ ಅವರ ಬೌಲಿಂಗ್​ ನೆರವಿನಿಂದ ಭಾರತ 8 ವಿಕೆಟ್​ಗಳ ಗೆಲುವು ಸಾಧಿಸಿತು. 2022ರಲ್ಲಿ ರಾಹುಲ್​ ನಾಯಕತ್ವದಲ್ಲಿ ಭಾರತ ಕ್ಲೀನ್​​ ಸ್ವೀಪ್​ಗೆ ಒಳಗಾಗಿತ್ತು. ಈಗ ಆ ಸೇಡನ್ನು ತೀರಿಸಿಕೊಳ್ಳಲು ರಾಹುಲ್​ ಹವಣಿಸುತ್ತಿದ್ದಾರೆ.

ಹರಿಣಗಳ ವಿರುದ್ಧ 'ಬಾಕ್ಸಿಂಗ್ ಡೇ' ಯಂದು ಆರಂಭವಾಗಲಿರುವ ಟೆಸ್ಟ್​ ಪಂದ್ಯಗಳ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಮೊದಲ ಪಂದ್ಯದ ನಂತರ ಶ್ರೇಯಸ್ ಅಯ್ಯರ್ ಟೆಸ್ಟ್ ತಂಡದೊಂದಿಗೆ ಸೇರಿಕೊಂಡು ಅಭ್ಯಾಸದಲ್ಲಿ ತೊಡಗಿಕೊಳ್ಳಲಿದ್ದಾರೆ. ತೆರವಾದ ಅಯ್ಯರ್​ ಜಾಗಕ್ಕೆ ಯಾವ ಆಟಗಾರನಿಗೆ ಅವಕಾಶ ಸಿಗಲಿದೆ ಮತ್ತು ಯಾರು ಪದಾರ್ಪಣೆ ಪಂದ್ಯವನ್ನು ಆಡಲಿದ್ದಾರೆ ಎಂಬುದು ಟಾಸ್​ ನಂತರ ತಿಳಿಯಲಿದೆ.

ಐರ್ಲೆಂಡ್​ ಸರಣಿಯ ನಂತರ ಅಂತಾರಾಷ್ಟ್ರೀಯ ಟಿ20 ತಂಡಕ್ಕೆ ಸೇರಿಕೊಂಡ ರಿಂಕು ಸಿಂಗ್​ ಏಕದಿನ ತಂಡಕ್ಕೆ ಪದಾರ್ಪಣೆ ಮಾಡುವ ಉತ್ಸುಕತೆಯಲ್ಲಿದ್ದಾರೆ. ಕ್ರಿಕೆಟ್​ ಅಭಿಮಾನಿಗಳು ರಿಂಕುವಿನ ಆಟವನ್ನು ನೋಡಲು ಕಾತರದಿಂದ ಇದ್ದಾರೆ ಎಂದರೆ ತಪ್ಪಾಗದು. ಎಡಗೈ ಆಟಗಾರ ದಕ್ಷಿಣ ಆಫ್ರಿಕಾದ ಹೆಚ್ಚು ಬೌನ್ಸ್​ ಇರುವ ಪಿಚ್​ನಲ್ಲಿ ಉತ್ತಮ ಪ್ರದರ್ಶನ ನೀಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಇವರ ಚೊಚ್ಚಲ ಪಂದ್ಯದ ನಿರೀಕ್ಷೆ ಹೆಚ್ಚಿನವರಲ್ಲಿದೆ.

ರಿಂಕು vs ರಜತ್​​: ಇಂದೋರ್ ಮೂಲದ ಬಲಗೈ ಆಟಗಾರ ಪಾಟಿದಾರ್ 2022ರಲ್ಲಿಯೇ ಭಾರತದ ಏಕದಿನ ತಂಡಕ್ಕೆ ಸೇರ್ಪಡೆ ಆಗಿದ್ದರು. ಆದರೆ ಕಳೆದ ಒಂದು ವರ್ಷದಲ್ಲಿ ಅವರು ಗಾಯಕ್ಕೆ ತುತ್ತಾಗಿ ತಂಡಕ್ಕೆ ಮರಳಲು ಸಮಸ್ಯೆ ಎದುರಿಸಿದರು. ಈ ವರ್ಷದ ಆರಂಭದಲ್ಲಿ ಹಿಮ್ಮಡಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಚೇತರಿಸಿಕೊಂಡು ತಂಡಕ್ಕೆ ಮರಳಿದ್ದಾರೆ. ರಿಂಕು ಸಿಂಗ್​​ ಅವರು 6ನೇ ಸ್ಥಾನದಲ್ಲಿ ದೇಶೀಯ ಕ್ರಿಕೆಟ್​ ಮತ್ತು ಟಿ20ಯಲ್ಲಿ ಆಡಿದ್ದಾರೆ. 30 ವರ್ಷದ ಪಾಟಿದಾರ್ ಅವರು ತಮ್ಮ ರಾಜ್ಯ ತಂಡ ಮಧ್ಯಪ್ರದೇಶಕ್ಕಾಗಿ ನಂ. 4ಕ್ಕೆ ಆಡಿದ್ದಾರೆ. ಅಯ್ಯರ್​ ಸ್ಥಾನ ತೆರವಾಗಿರುವುದರಿಂದ ರಜತ್​ಗೆ ಹೆಚ್ಚಿನ ಅವಕಾಶ ಇದೆ.

ಸಾಯಿ ಸ್ಥಾನ ಭದ್ರ:ವಿಕೆಟ್​ ಕೀಪರ್​ ಸ್ಥಾನದಲ್ಲಿ ನಾಯಕ ರಾಹುಲ್​ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅನುಭವಿ ಸಂಜು ಸ್ಯಾಮ್ಸನ್​ಗೆ ಹೆಚ್ಚಿನ ಅವಕಾಶ ಸಿಗುತ್ತಿಲ್ಲ. ಮೊದಲ ಪಂದ್ಯದಲ್ಲಿ ಬ್ಯಾಟಿಂಗ್​ ಸಹ ಸಂಜುಗೆ ಸಿಗಲಿಲ್ಲ. ಹೀಗಾಗಿ ರಾಹುಲ್​ ಬ್ಯಾಟರ್​ ಆಗಿ ಉಳಿದು ಸಂಜುಗೆ ಸ್ಥಾನ ಕೊಡುವ ಅಗತ್ಯವೂ ಇದೆ. 6ನೇ ಸ್ಥಾನದಲ್ಲಿ ಸ್ಯಾಮ್ಸನ್​ ಆಡುತ್ತಿದ್ದಾರೆ. ಹೀಗಾಗಿ ರಿಂಕುಗೆ ಆ ಸ್ಥಾನ ಸಿಗುವುದು ಹೆಚ್ಚು ಕಡಿಮೆ ಕಷ್ಟ ಎಂದೇ ಹೇಳಬಹುದು. ರಿಂಕು ಮತ್ತು ಪಾಟಿದಾರ್ ಅವರನ್ನು ತಂಡದಲ್ಲಿ ಆಡಿಸಬೇಕಾದರೆ ತಿಲಕ್​ ವರ್ಮಾ ಅವರನ್ನು ಕೂರಿಸಬೇಕಾಗುತ್ತದೆ. ಪದಾರ್ಪಣೆ ಪಂದ್ಯದಲ್ಲೇ ಅರ್ಧಶತಕ ದಾಖಲಿಸಿ ಯುವ ಎಡಗೈ ಓಪನರ್ ಬಿ ಸಾಯಿ ಸುದರ್ಶನ್ ಸ್ಥಾನವನ್ನು ಭದ್ರ ಪಡಿಸಿಕೊಂಡರು.

ಲಯಕ್ಕೆ ಮರಳ ಬೇಕಿದೆ ಹರಿಣಗಳ ಬ್ಯಾಟಿಂಗ್​:ಹರಿಣಗಳ ಪಡೆಗೆ ಈ ಸರಣಿಯು ಕ್ವಿಂಟನ್ ಡಿ ಕಾಕ್ ನಿವೃತ್ತಿಯ ನಂತರ ಮೊದಲ ಸರಣಿ ಆಗಿದೆ. ವೈಟ್​ ಬಾಲ್​ ಸ್ಪರ್ಧೆಯಲ್ಲಿ ತವರಿನಲ್ಲೇ ದಕ್ಷಿಣ ಆಫ್ರಿಕಾ ಪಡೆ ಭಾರತದ ಬೌಲಿಂಗ್​ಗೆ ಪರದಾಡಿದೆ. ಎರಡನೇ ಪಂದ್ಯಕ್ಕೆ ಹರಿಣಗಳು ಮೊನಚಾದ ಬ್ಯಾಟಿಂಗ್​ನ್ನು ಕಂಡುಕೊಳ್ಳಬೇಕಿದೆ. ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ಸ್, ಹೆನ್ರಿಚ್ ಕ್ಲಾಸೆನ್ಸ್ ಮತ್ತು ಡೇವಿಡ್ ಮಿಲ್ಲರ್​​ ಭಾರತದ ವಿರುದ್ಧ ಪುಟಿದೇಳಬೇಕಿದೆ. ಮೊದಲ ಪಂದ್ಯ ಹಗಲಿನಲ್ಲೇ ನಡೆದರೆ, ಎರಡನೇ ಪಂದ್ಯ ಹೊನಲು ಬೆಳಕಿನಲ್ಲಿ ಇರಲಿದೆ. ಸರಣಿ ಸಮಬಲ ಮಾಡಲು ಹರಿಣಗಳು ಗುದ್ದಾಡಬೇಕಿದೆ.

ಭಾರತದ ಬೌಲಿಂಗ್​ ಸ್ಥಿರ: ಅರ್ಶದೀಪ್​ ಸಿಂಗ್​ ಮತ್ತು ಅವೇಶ್ ಖಾನ್​ ಅನುಭವಿ ಬೌಲರ್​ಗಳಾದ ಸಿರಾಜ್​, ಬುಮ್ರಾ ಮತ್ತು ಶಮಿ ಹೊರತಾಗಿ ಹೊಸ ಭರವಸೆ ನೀಡಿದ್ದಾರೆ. ಭರವಸೆಯ ಮುಖೇಶ್ ಕುಮಾರ್ ದಕ್ಷಿಣ ಆಫ್ರಿಕಾ ಎದುರು ಪುನರಾಗಮನ ಮಾಡಬೇಕಿದೆ. ಇಲ್ಲ ಆಕಾಶ್ ದೀಪ್‌ಗೆ ತಂಡ ಚೊಚ್ಚಲ ಕರೆ ನೀಡಬಹುದು.

ತಂಡಗಳು.. ಭಾರತ: ರುತುರಾಜ್ ಗಾಯಕ್‌ವಾಡ್, ಸಾಯಿ ಸುದರ್ಶನ್, ರಜತ್ ಪಾಟಿದಾರ್, ತಿಲಕ್ ವರ್ಮಾ, ಕೆಎಲ್ ರಾಹುಲ್(ನಾಯಕ/ವಿಕೆಟ್​ ಕೀಪರ್​), ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಅರ್ಷ್‌ದೀಪ್ ಸಿಂಗ್, ಅವೇಶ್ ಖಾನ್, ಕುಲದೀಪ್ ಯಾದವ್, ಮುಖೇಶ್ ಕುಮಾರ್

ದಕ್ಷಿಣ ಆಫ್ರಿಕಾ: ರೀಜಾ ಹೆಂಡ್ರಿಕ್ಸ್, ಟೋನಿ ಡಿ ಝೋರ್ಜಿ, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಕ್ ಕ್ಲಾಸೆನ್ (ವಿಕೆಟ್​ ಕೀಪರ್​), ಡೇವಿಡ್ ಮಿಲ್ಲರ್, ವಿಯಾನ್ ಮುಲ್ಡರ್, ಆಂಡಿಲ್ ಫೆಹ್ಲುಕ್ವಾಯೊ, ಕೇಶವ್ ಮಹಾರಾಜ್, ನಾಂದ್ರೆ ಬರ್ಗರ್, ತಬ್ರೈಜ್ ಶಮ್ಸಿ

ಪಂದ್ಯ:ಡಿಸೆಂಬರ್​ 19 ಮಂಗಳವಾರ, ಗ್ಕೆಬರ್ಹಾ, ಸೇಂಟ್ ಜಾರ್ಜ್ ಪಾರ್ಕ್. ಸಂಜೆ 4:30ಕ್ಕೆ (ಭಾರತೀಯ ಕಾಲಮಾನ)

ಇದನ್ನೂ ಓದಿ:ಯಶಸ್ವಿ ಬೌಲಿಂಗ್ ರಹಸ್ಯ ಹಂಚಿಕೊಂಡ ಅರ್ಶದೀಪ್​, ಅವೇಶ್​ ಜೋಡಿ

ABOUT THE AUTHOR

...view details