ಸೆಂಚುರಿಯನ್(ದಕ್ಷಿಣ ಆಫ್ರಿಕಾ): ನಿವೃತ್ತಿಯ ಸರಣಿ ಆಡುತ್ತಿರುವ ಡೀನ್ ಎಲ್ಗರ್ ಸಿಡಿಸಿದ ಶತಕ ದಕ್ಷಿಣ ಆಫ್ರಿಕಾಕ್ಕೆ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ 11 ರನ್ಗಳ ಮುನ್ನಡೆ ತಂದುಕೊಟ್ಟಿತು. ಎರಡನೇ ದಿನದಾಟದ ಅಂತ್ಯಕ್ಕೆ ಹರಿಣ ಪಡೆ 256ಕ್ಕೆ 5 ವಿಕೆಟ್‌ಗಳನ್ನು ಕಳೆದುಕೊಂಡಿದೆ. ಕ್ರೀಸ್ನಲ್ಲಿ 140 ರನ್ ಗಳಿಸಿದ ಡೀನ್ ಎಲ್ಗರ್ ಮತ್ತು ಮಾರ್ಕೋ ಜಾನ್ಸನ್ ಇದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ಕೆ.ಎಲ್.ರಾಹುಲ್ ಅವರ ಶತಕದಾಟದ ಬಲದಿಂದ ಮೊದಲ ಇನ್ನಿಂಗ್ಸ್‌ನಲ್ಲಿ 245 ರನ್ ಗಳಿಸಿ ಆಲೌಟ್ ಆಗಿತ್ತು. ಎರಡನೇ ದಿನ ಮೊದಲ ಇನ್ನಿಂಗ್ಸ್ ಆರಂಭಿಸಿದ ಹರಿಣಗಳ ಪಡೆಗೆ ಉತ್ತಮ ಆರಂಭ ದೊರೆಯಲಿಲ್ಲ. ಐಡೆನ್ ಮಾರ್ಕ್ರಾಮ್ ಸಿರಾಜ್ ದಾಳಿಗೆ ಬಲಿಯಾದರು. ಆದರೆ ಎರಡನೇ ವಿಕೆಟ್ಗೆ ಒಂದಾದ ಎಲ್ಗರ್ ಮತ್ತು ಟೋನಿ ಡಿ ಝೋರ್ಜಿ 93 ರನ್ಗಳ ಜತೆಯಾಟ ಹಂಚಿಕೊಂಡಿತು. ಇನ್ನಿಂಗ್ಸ್‌ನಲ್ಲಿ ಟೋನಿ 28 ರನ್ ಗಳಿಸಿ ಔಟ್ ಆದರು. ಬುಮ್ರಾ ಕೀಗನ್ ಪೀಟರ್ಸನ್ (2) ಅವರನ್ನು ಬೇಗ ಪೆವಿಲಿಯನ್ಗೆ ಕಳುಹಿಸಿದರು.
ಭಾರತವನ್ನು ಕಾಡಿದ ಎಲ್ಗರ್, ಡೇವಿಡ್:ಬುಮ್ರಾ ಬೆನ್ನು ಬೆನ್ನಿಗೆ ಎರಡು ವಿಕೆಟ್ ಕಬಳಿಸಿ ದಕ್ಷಿಣ ಆಫ್ರಿಕಾದ ಮೇಲೆ ಒತ್ತಡ ಹೇರಿದರು. ಆದರೆ ಅನುಭವಿ ಆಟಗಾರ ಎಲ್ಗರ್ ಭಾರತದ ಬೌಲಿಂಗ್ ದಾಳಿಯನ್ನು ತಾಳ್ಮೆಯಿಂದ ಎದುರಿಸಿ ಸಮಯೋಚಿತ ಶಾಟ್ಗಳ ಮೂಲಕ ರನ್ ಕದಿಯುತ್ತಾ ಬಂದರು. ಡೇವಿಡ್ ಬೆಡಿಂಗ್ಹ್ಯಾಮ್ ಮತ್ತು ಡೀನ್ ಜೋಡಿ 4ನೇ ವಿಕೆಟ್ಗೆ 131 ರನ್ಗಳ ಪಾಲುದಾರಿಕೆ ಹಂಚಿಕೊಂಡಿತು.