ಸೆಂಚುರಿಯನ್(ದಕ್ಷಿಣ ಆಫ್ರಿಕಾ): ಕಗಿಸೊ ರಬಾಡ ಕರಾರುವಾಕ್ ಬೌಲಿಂಗ್ ದಾಳಿಯೆದುರು ಭಾರತೀಯರ ಬ್ಯಾಟಿಂಗ್ ಮಂಕಾಯಿತು. 59 ಓವರ್ಗಳ ಪಂದ್ಯ ನಡೆಯುತ್ತಿದ್ದಂತೆ ಮಳೆ ಸುರಿದು ದಿನದಾಟ ಕೊನೆಗೊಂಡಿತು. ಭಾರತ 8 ವಿಕೆಟ್ ಕಳೆದುಕೊಂಡು 208 ರನ್ ಗಳಿಸಿದೆ. ರಬಾಡ 5 ವಿಕೆಟ್ ಉರುಳಿಸಿ ಪ್ರಭಾವಿ ಬೌಲರ್ ಎನಿಸಿದರು. 70 ರನ್ ಗಳಿಸಿದ ಕೆ.ಎಲ್.ರಾಹುಲ್ ಮತ್ತು ಮೊಹಮ್ಮದ್ ಸಿರಾಜ್ ನಾಳೆಗೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ಗಿಳಿದ ಭಾರತ ಹರಿಣಗಳ ಬಿಗು ಬೌಲಿಂಗ್ ದಾಳಿಗೆ ತಕ್ಕ ಪ್ರತಿರೋಧ ತೋರುವಲ್ಲಿ ವಿಫಲವಾಯಿತು. ಆರಂಭದ ಮೂರು ವಿಕೆಟ್ಗಳನ್ನು ತಂಡ ಕೇವಲ 24 ರನ್ ಗಳಿಸುವಷ್ಟರಲ್ಲೇ ಕಳೆದುಕೊಂಡಿತು. ರೋಹಿತ್ ಶರ್ಮಾ (5 ರನ್), ಯಶಸ್ವಿ ಜೈಸ್ವಾಲ್ (17) ಮತ್ತು ಶುಭಮನ್ ಗಿಲ್ (2) ದೊಡ್ಡ ಕೊಡುಗೆ ನೀಡುವಲ್ಲಿ ವಿಫಲರಾದರು.
ನಾಲ್ಕನೇ ವಿಕೆಟ್ಗೆ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ 67 ರನ್ಗಳ ಪಾಲುದಾರಿಕೆ ಹಂಚಿಕೊಂಡರು. ಭೋಜನ ವಿರಾಮ ಮುಗಿಸಿ ಕ್ರೀಸ್ ಮರಳುತ್ತಿದ್ದಂತೆ ಅಯ್ಯರ್ ವಿಕೆಟ್ ಪತನವಾಯಿತು. ಅಯ್ಯರ್ 50 ಎಸೆತಗಳಲ್ಲಿ 31 ರನ್ ಗಳಿಸಿ ಔಟಾದರು. ಇವರ ಬೆನ್ನಲ್ಲೇ 38 ರನ್ ಗಳಿಸಿ ವಿರಾಟ್ ಕೊಹ್ಲಿ ಕೂಡಾ ಪೆವಿಲಿಯನ್ಗೆ ಮರಳಿದರು.