ಸೆಂಚುರಿಯನ್(ದಕ್ಷಿಣ ಆಫ್ರಿಕಾ): ಹರಿಣಗಳ ನಾಡಿನಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆಲ್ಲುವ ಗುರಿಯೊಂದಿಗೆ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಮೈದಾನಕ್ಕಿಳಿಯಲು ಸಜ್ಜಾಗಿದೆ. 1992ರ ನಂತರ 9ನೇ ಬಾರಿಗೆ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದು, 31 ವರ್ಷಗಳ ಕಾಯುವಿಕೆ ಕೊನೆಗೊಳಿಸಲು ತಂಡ ಕಠಿಣ ತಯಾರಿ ನಡೆಸಿದೆ.
ನಾಳೆಯಿಂದ (ಮಂಗಳವಾರ) ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಬೌನ್ಸ್ ಮತ್ತು ಸ್ವಿಂಗ್ ಹೆಚ್ಚಿರುವ ಪಿಚ್ಗಳಲ್ಲಿ ತಂಡ ಯಶಸ್ವಿಯಾಗಿ ಕಾರ್ಯನಿರ್ವಹಿಸಬೇಕಿದೆ. ಏಕದಿನ ವಿಶ್ವಕಪ್ನ ನಂತರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅದೇ ಫಾರ್ಮ್ ಅನ್ನು ಇಲ್ಲಿಯೂ ಮುಂದುವರೆಸಿದಲ್ಲಿ ದಕ್ಷಿಣ ಆಫ್ರಿಕಾದ ಯುವ ಪಡೆಯನ್ನು ಮಣಿಸುವ ಅವಕಾಶವಿದೆ. ಆದರೆ ಮಳೆ ಕಾಡುವ ಮುನ್ಸೂಚನೆಯು ಅಡಚಣೆ ಇಲ್ಲದೇ ಪಂದ್ಯ ನಡೆಯುವ ಬಗ್ಗೆ ಅನುಮಾನ ಉಂಟುಮಾಡಿದೆ.
ದಕ್ಷಿಣ ಆಫ್ರಿಕಾದ ಗುಡ್ಡಗಾಡು ಪ್ರದೇಶದ ನಡುವೆ ಇರುವ ಸೆಂಚುರಿಯನ್ ಮೈದಾನದಲ್ಲಿ ವೇಗವಾಗಿ ಗಾಳಿ ಬೀಸುತ್ತದೆ. ಪಿಚ್ ಹೆಚ್ಚಿನ ಬೌನ್ಸ್ ಲಕ್ಷಣ ಹೊಂದಿದೆ. ಅಲ್ಲದೇ ಎತ್ತರದ ಜಾಗದಲ್ಲಿ ಮೈದಾನ ಇರುವುದು ಆಟಗಾರರ ಉಸಿರಾಟದ ಮೇಲೂ ಒತ್ತಡ ತರುತ್ತದೆ. ಈ ಎಲ್ಲಾ ಸವಾಲುಗಳನ್ನು ಭಾರತೀಯರು ಒಟ್ಟಿಗೆ ಎದುರಿಸಬೇಕು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ರೋಹಿತ್ ಶರ್ಮಾ, ಇಲ್ಲಿ ಬೌನ್ಸಿ ಪಿಚ್ ಇರುತ್ತದೆ. ಹಾಗೆಯೇ ಉತ್ತಮ ಕೌಶಲ್ಯದಿಂದ ಬ್ಯಾಟಿಂಗ್ ಮಾಡಿದರೆ ರನ್ ಗಳಿಸಬಹುದು. ಆದರೆ ಪಿಚ್ ಅರಿಯುವುದು ಅತ್ಯಂತ ಮುಖ್ಯ ಎಂದರು. ಅಲ್ಲದೇ ಮಳೆ ಪಿಚ್ನ ವರ್ತನೆಯ ಮೇಲೆ ಪರಿಣಾಮ ಬೀರುವುದರಿಂದ ಬೌಲಿಂಗ್ ವಿಭಾಗದ ಆಯ್ಕೆಯ ಗೊಂದಲವನ್ನು ಅವರು ತೆರೆದಿಟ್ಟಿದ್ದಾರೆ.
ಸರಣಿ ಗೆಲ್ಲದ ಆರು ನಾಯಕರು:ಮೊಹಮ್ಮದ್ ಅಜರುದ್ದೀನ್ (1992), ಸಚಿನ್ ತೆಂಡೂಲ್ಕರ್ (1996), ಸೌರವ್ ಗಂಗೂಲಿ (2001) ನಾಯಕತ್ವದಲ್ಲಿ ಸರಣಿಯ ಒಂದು ಪಂದ್ಯವನ್ನೂ ಭಾರತ ಗೆದ್ದಿರಲಿಲ್ಲ. ರಾಹುಲ್ ದ್ರಾವಿಡ್ (2006-07), ಧೋನಿ (2010-11 ಮತ್ತು 2013-14), ವಿರಾಟ್ ಕೊಹ್ಲಿ (2018-19 ಮತ್ತು 2021-22) ನಾಯಕತ್ವದಲ್ಲಿ ತಂಡ ಒಂದೊಂದು ಪಂದ್ಯಗಳನ್ನು ಗೆದ್ದಿತ್ತು. ಆದರೆ 6 ನಾಯಕರು ಸರಣಿ ಗೆಲ್ಲುವಲ್ಲಿ ವಿಫಲರಾಗಿದ್ದಾರೆ.
ಕಠಿಣ ಬೌಲಿಂಗ್ ದಾಳಿ:ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್ ಗಿಲ್ ಅವರು ಕಗಿಸೊ ರಬಾಡ, ಲುಂಗಿ ಎನ್‌ಗಿಡಿ, ಮಾರ್ಕೊ ಜಾನ್‌ಸೆನ್ ಮತ್ತು ಜೆರಾಲ್ಡ್ ಕೊಯೆಟ್ಜಿ ಅವರ ಪರೀಕ್ಷೆಯನ್ನು ಎದುರಿಸಬೇಕಿದೆ. ದೇಶೀ ನೆಲದಲ್ಲಿ ಟೆಸ್ಟ್ನಲ್ಲಿ ಉತ್ತಮ ಅಂಕಿಅಂಶ ಹೊಂದಿರುವ ಗಿಲ್ ವಿದೇಶದಲ್ಲಿ ಸಾಬೀತುಪಡಿಸಿಕೊಳ್ಳಬೇಕಿದೆ. ಗಾಯದಿಂದ ಚೇತರಿಸಿಕೊಂಡು ಏಕದಿನ ಮಾದರಿಯಲ್ಲಿ ಕಮ್ಬ್ಯಾಕ್ ಮಾಡಿರುವ ಶ್ರೇಯಸ್ ಅಯ್ಯರ್ಗೆ ಹೊಸ ಸವಾಲು ಮುಂದಿದೆ. ಇತ್ತೀಚೆಗೆ ಅಯ್ಯರ್ ಅವರ ಮೇಲೆ ಬೌನ್ಸ್ ಬಾಲ್ಗಳಿಗೆ ವಿಕೆಟ್ ಕೊಡುತ್ತಾರೆ ಎಂಬ ಆರೋಪವೂ ಕೇಳಿ ಬಂದಿದೆ. ಇದನ್ನು ಅವರು ಸುಳ್ಳೆಂದು ಸಾಬೀತು ಮಾಡಬೇಕಿದೆ.