ಜೋಹಾನ್ಸ್‌ಬರ್ಗ್ (ದಕ್ಷಿಣ ಆಫ್ರಿಕಾ): ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ನ ಸೋಲಿನ ನಂತರ ಭಾರತ ತಂಡ ಮೊದಲ ಒನ್ಡೇ ಪಂದ್ಯವನ್ನು ಆಡುತ್ತಿದೆ. ಭಾನುವಾರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ ರಹಿತವಾಗಿ ಕೆಎಲ್ ರಾಹುಲ್ ನಾಯಕತಯತ್ವದಲ್ಲಿ ಮುಂದಿನ ಭರವಸೆಯ ಯುವ ತಂಡ ಮೈದಾನಕ್ಕಿಳಿಯಲು ಸಜ್ಜಾಗಿದೆ.
ಏಕದಿನ ಸರಣಿಗೂ ಮುನ್ನ ನಡೆದ 3 ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ 1-1 ರಿಂದ ಸಮಬಲ ಸಾಧಿಸಿದೆ. ಮೊದಲ ಪಂದ್ಯ ಟಾಸ್ ಕೂಡಾ ಕಾಣದೇ ಮಳೆಗೆ ಆಹುತಿ ಆದರೆ, ಎರಡನೇ ಪಂದ್ಯವನ್ನು ಸೋತರೂ ಅಂತಿಮ ಸವಾಲನ್ನು ಗೆದ್ದು ಸರಣಿ ಸೋಲಿನಿಂದ ತಪ್ಪಿಸಿಕೊಂಡಿತು. ಸೂರ್ಯ ನಾಯಕತ್ವದಲ್ಲಿ ತಂಡ ಆಸ್ಟ್ರೇಲಿಯಾ ನಂತರ ಹರಿಣಗಳ ವಿರುದ್ಧವೂ ಉತ್ತಮ ಪ್ರದರ್ಶನ ನೀಡಿತು.
ರಾಷ್ಟ್ರೀಯ ತಂಡಗಳು ಒಂದೆಡೆ 2024ರ ಟಿ20 ವಿಶ್ವಕಪ್, ಮತ್ತೊಂದೆಡೆ 2025ರ ಚಾಂಪಿಯನ್ಸ್ ಟ್ರೋಫಿಗೆ ತಯಾರಿಗಳನ್ನು ಮಾಡುತ್ತಿದೆ. ಅನುಭವಿ ಆಟಗಾರರ ಹೊರತಾಗಿ ಐಸಿಸಿ ಟ್ರೋಫಿಯಲ್ಲಿ ಕಣಕ್ಕಿಳಿಯಲು ಬಿಸಿಸಿಐ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಅಲ್ಲದೇ, ಯುವ ತಂಡವನ್ನು ಸಿದ್ಧಪಡಿಸುತ್ತಿದೆ.
ಆರಂಭಿಕರು ಯಾರು?: ಹರಿಣಗಳ ವಿರುದ್ಧದ ಸರಣಿಗೆ ಆಯ್ಕೆ ಸಮಿತಿ ರುತುರಾಜ್ ಗಾಯಕ್ವಾಡ್ ಮತ್ತು ಸಾಯಿ ಸುದರ್ಶನ್ ಅವರನ್ನು ಮಾತ್ರ ಆರಂಭಿಕರನ್ನಾಗಿ ಆಯ್ಕೆ ಮಾಡಿದೆ. ಅಗತ್ಯ ಬಿದ್ದಲ್ಲಿ ನಾಯಕ ಕೆ ಎಲ್ ರಾಹುಲ್ ಪಂದ್ಯ ತೆರೆಯುವ ಸಾಮರ್ಥ್ಯ ಹೊಂದಿದ್ದಾರೆ. ಸಾಯಿ ಸುದರ್ಶನ್ ಪದಾರ್ಪಣೆಯ ಪಂದ್ಯ ಎದುರು ನೋಡುತ್ತಿದ್ದಾರೆ. 5ನೇ ಏಕದಿನ ಪಂದ್ಯದಲ್ಲಿ ಖಾತೆ ತೆರೆಯಲು ರುತುರಾಜ್ ಗಾಯಕ್ವಾಡ್ ಕಾತರದಿಂದ ಇದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ಮೂರನೇ ಕ್ರಮಾಂಕದಲ್ಲಿ ಆಡಿದ ತಿಲಕ್ ವರ್ಮಾ ಮತ್ತೆ ಅದೇ ಸ್ಥಾನದಲ್ಲಿ ಅವಕಾಶದ ನಿರೀಕ್ಷೆಯಲ್ಲಿದ್ದರೆ, ಏಕದಿನ ವಿಶ್ವಕಪ್‌ನಲ್ಲಿ 4 ಮತ್ತು 5ನೇ ಸ್ಥಾನದಲ್ಲಿ ಉತ್ತಮ ಪ್ರದರ್ಶನ ನೀಡಿದ ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಅದೇ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ. ಕೆಳ ಕ್ರಮಾಂಕದಲ್ಲಿ ಮೂವರು ಬ್ಯಾಟರ್ಗಳ ನಡುವೆ ಪೈಪೋಟಿ ನಡೆಯಲಿದೆ. ಹಲವು ಬಾರಿ ಅವಕಾಶ ವಂಚಿತರಾಗಿರುವ ಸಂಜು ಸ್ಯಾಮ್ಸನ್, ರಿಂಕು ಸಿಂಗ್ ಮತ್ತು ರಜತ್ ಪಾಟಿದಾರ್ ಸ್ಪರ್ಧೆಯಲ್ಲಿದ್ದಾರೆ.
ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದ ವಿರುದ್ಧದ ಟಿ20 ಸರಣಿಯಲ್ಲಿ 6ನೇ ಸ್ಥಾನದಲ್ಲಿ ಅಬ್ಬರಿಸಿ ಫಿನಿಶರ್ ಸ್ಥಾನವನ್ನು ಪಡೆದುಕೊಂಡಿರುವ ರಿಂಕು ಏಕದಿನಕ್ಕೂ ಪದಾರ್ಪಣೆ ಮಾಡುವ ಸಾಧ್ಯತೆ ಇದೆ. ಕೆಎಲ್ ರಾಹುಲ್ ಕೀಪಿಂಗ್ ನಿರ್ವಹಣೆ ಮಾಡುವುದರಿಂದ ಸಂಜುಗೆ ಸ್ಥಾನ ಸಿಗುವುದು ಅನುಮಾನವಾಗಿದೆ.
ಹರಿಣಗಳಿಗೆ ಬೌಲರ್ಗಳ ಕೊರತೆ: ದಕ್ಷಿಣ ಆಫ್ರಿಕಾ ತಂಡಕ್ಕೆ ಮೈನಸ್ ಆಗಿರುವುದು ಅನುಭವಿ ಬೌಲರ್ಗಳ ಕೊರತೆ. ವಿಶ್ರಾಂತಿ ಪಡೆದ ಕಗಿಸೊ ರಬಾಡ ಮತ್ತು ಗಾಯಗೊಂಡ ಅನ್ರಿಚ್ ನಾರ್ಟ್ಜೆ ಅವರ ಅನುಪಸ್ಥಿತಿ ಹರಿಣಗಳ ತಂಡವನ್ನು ದುರ್ಬಲಗೊಳಿಸಿದೆ. ಅಲ್ಲದೇ ಏಕದಿನ ವಿಶ್ವಕಪ್‌ನಲ್ಲಿ ಆಡಿದ ಬ್ಯಾಟರ್ಗಳೂ ಸಹ ದಕ್ಷಿಣ ಆಫ್ರಿಕಾಕ್ಕೆ ಇಲ್ಲ. ವಿಶ್ವಕಪ್ ನಂತರ ಡಿ ಕಾಕ್ ಏಕದಿನ ಮಾದರಿಗೆ ನಿವೃತ್ತಿ ಘೋಷಿಸಿದ್ದಾರೆ. ಐಡೆನ್ ಮಾರ್ಕ್ರಾಮ್ ಮತ್ತು ಡೇವಿಡ್ ಮಿಲ್ಲರ್ ತಂಡದಲ್ಲಿರುವ ಅನುಭವಿ ಆಟಗಾರರಾಗಿದ್ದಾರೆ.