ಕರ್ನಾಟಕ

karnataka

ETV Bharat / sports

ವಿಶ್ವಕಪ್ ಕ್ರಿಕೆಟ್: ಅಫ್ಘಾನಿಸ್ತಾನ ವಿರುದ್ಧ ಹರಿಣಗಳಿಗೆ 5 ವಿಕೆಟ್​ಗಳ ಭರ್ಜರಿ ಜಯ - World Cup 2023

World Cup 2023 South Africa vs Afghanistan match: ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆಲುವು ಸಾಧಿಸಿದೆ.

South Africa vs Afghanistan Live Match
South Africa vs Afghanistan Live Match

By ETV Bharat Karnataka Team

Published : Nov 10, 2023, 1:47 PM IST

Updated : Nov 10, 2023, 10:25 PM IST

ಅಹಮದಾಬಾದ್(ಗುಜರಾತ್): ಐಸಿಸಿ ಏಕದಿನ ವಿಶ್ವಕಪ್​ ಸರಣಿಯ 42ನೇ ಪಂದ್ಯದಲ್ಲಿಂದು ಅಫ್ಘಾನಿಸ್ತಾನದ ವಿರುದ್ಧ ದಕ್ಷಿಣ ಆಫ್ರಿಕಾ 5 ವಿಕೆಟ್​ಗಳ ಗೆಲುವು ದಾಖಲಿಸಿದೆ. ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ನೀಡಿದ್ದ 245 ರನ್​ಗಳ ಗುರಿಯನ್ನು ಬೆನ್ನಟ್ಟಿದ ಹರಿಣ ಪಡೆ, ಕ್ವಿಂಟನ್ ಡಿ ಕಾಕ್(41), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್(76), ಆಂಡಿಲ್ ಫೆಹ್ಲುಕ್ವಾಯೊ(39) ಬ್ಯಾಟಿಂಗ್​ ನೆರವಿನಿಂದ 47.3 ಓವರ್​ಗಳಲ್ಲಿ 5 ವಿಕಟ್​ ನಷ್ಟಕ್ಕೆ ಗುರಿಯನ್ನು ತಲುಪುವ ಮೂಲಕ ವಿಶ್ವಕಪ್​ ಟೂರ್ನಿಯಲ್ಲಿ 7ನೇ ಗೆಲುವು ದಾಖಲಿಸಿತು.

ಅಫ್ಘಾನ್​ ಪರ ಮೊಹಮ್ಮದ್ ನಬಿ, ರಶೀದ್ ಖಾನ್ ತಲಾ ಎರಡು ವಿಕೆಟ್​ ಪಡೆದರೆ, ಮುಜೀಬ್ ಉರ್ ರಹಮಾನ್ ಒಂದು ವಿಕೆಟ್​ ಪಡೆದರು. ಇದಕ್ಕೂ ಮೊದಲು ಟಾಸ್​ ಗೆದ್ದು ಬ್ಯಾಟಿಂಗ್​ ಮಾಡಿದ ಅಫ್ಘಾನ್​ 50 ಓವರ್​ಗಳಲ್ಲಿ 245 ರನ್​ಗಳ ಕಲೆ ಹಾಕಿತ್ತು. ತಂಡದ ಪರ, ರಹಮಾನುಲ್ಲಾ ಗುರ್ಬಾಜ್(25), ಇಬ್ರಾಹಿಂ ಝದ್ರಾನ್(15) ರನ್​ಗಳಿಸುವ ತವಕದಲ್ಲಿ ವಿಕೆಟ್​ ಒಪ್ಪಿಸಿ ಪೆವಿಲಿಯನ್​ ಸೇರಿದರು. ಕ್ರೀಸ್​ಗೆ ಬಂದ ನಾಯಕ ಹಶ್ಮತುಲ್ಲಾ ಶಾಹಿದಿ(2), ರಹಮತ್ ಶಾ(26), ಇಕ್ರಮ್ ಅಲಿಖಿಲ್(12), ಮೊಹಮ್ಮದ್ ನಬಿ(2) ಒಬ್ಬರ ಹಿಂದೊಬ್ಬರು ನಿರ್ಗಮಿಸುವ ಮೂಲಕ 116 ರನ್​ಗಳಿಗೆ 6 ವಿಕೆಟ್​ ಕಳೆದುಕೊಂಡ ತಂಡ ಸಂಕಷ್ಠಕ್ಕೆ ಸಿಲುಕಿತು. ಬಳಿಕ ಕ್ರೀಸ್​ಗೆ ಬಂದ ರಶೀದ್​ ಖಾನ್​(14), ನೂರ್​ ಅಹ್ಮದ್​(26) ಕೂಡ ಹೆಚ್ಚಿನ ಸ್ಕೋರ್​ ಕಲೆ ಹಾಕಲು ಹೋಗಿ ವಿಕೆಟ್​ ಒಪ್ಪಿಸಿದರು.

ಮತ್ತೊಂದೆಡೆ ಅಜ್ಮತುಲ್ಲಾ ಒಮರ್ಜಾಯ್(97) ಕ್ರೀಸ್​ಗೆ ಒಗ್ಗಿಕೊಂಡ ಅವರು 50 ಓವರ್​ಗಳ ಮುಕ್ತಾಯದ ವೇಳೆಗೆ ತಂಡದ ಸ್ಕೋರ್​ ಅನ್ನು 245ಕ್ಕೆ ಕೊಂಡೊಯ್ದು ಶತಕ ವಂಚಿತರಾದರೂ ಅಜೇಯರಾಗಿಯೇ ಉಳಿದರು. ದಕ್ಷಿಣ ಆಫ್ರಿಕಾ ಪರ ಜೆರಾಲ್ಡ್ ಕೊಯೆಟ್ಜಿ 4ವಿಕೆಟ್​, ಆಂಡಿಲ್ ಫೆಹ್ಲುಕ್ವಾಯೊ 1, ಲುಂಗಿ ಎನ್ಗಿಡಿ, ಕೇಶವ್ ಮಹಾರಾಜ್ ತಲಾ ಎರಡು ವಿಕೆಟ್​ ಪಡೆದರು.

ದಕ್ಷಿಣ ಆಫ್ರಿಕಾ ಈಗಾಗಲೇ ಅಧಿಕೃತವಾಗಿ ಸೆಮಿಫೈನಲ್ ಪ್ರವೇಶಿಸಿದ್ದು, ಅಫ್ಘಾನ್ ವಿರುದ್ಧದ ಇಂದಿನ ಪಂದ್ಯ ಅನೌಪಚಾರಿಕವಾಗಿತ್ತು. ಮತ್ತೊಂದೆಡೆ ಅಫ್ಘಾನ್​ ತನ್ನ ಕೊನೆಯ ಪಂದ್ಯವನ್ನು ಸೋಲುವ ಮೂಲಕ ಟೂರ್ನಿಯಲ್ಲಿ ಆಡಿದ 9 ಪಂದ್ಯಗಳಲ್ಲಿ 4ರಲ್ಲಿ ಗೆದ್ದು 5ರಲ್ಲಿ ಸೋತು 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನ ಭದ್ರಪಡಿಸಿಕೊಳ್ಳವ ಮೂಲಕ ವಿಶ್ವಕಪ್ ಟೂರ್ನಿಯನ್ನು ಮುಕ್ತಾಯಗೊಳಿಸಿತು.

ಇದನ್ನೂ ಓದಿ:ವಿಶ್ವಕಪ್ ಸೆಮಿ ಫೈನಲ್‌ನತ್ತ ಕಿವೀಸ್​: ಪವಾಡ ನಡೆದರೆ ಮಾತ್ರ ಪಾಕ್​ಗೆ ಚಾನ್ಸ್‌

Last Updated : Nov 10, 2023, 10:25 PM IST

ABOUT THE AUTHOR

...view details