ಹೈದರಾಬಾದ್: ಜೂನ್ 9ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಐದು ಟಿ-20 ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ ಭಾಗಿಯಾಗಲಿದ್ದು, ಬ್ಲೂ ಬಾಯ್ಸ್ ತಂಡದ ನಾಯಕತ್ವದ ಜವಾಬ್ದಾರಿ ಕನ್ನಡಿಗ ಕೆಎಲ್ ರಾಹುಲ್ ವಹಿಸಿಕೊಂಡಿದ್ದಾರೆ. ಈ ಹಿಂದೆ ಭಾರತದಲ್ಲಿ ನಡೆದ ಉಭಯ ತಂಡಗಳ ನಡುವಿನ ಟಿ-20 ಸರಣಿಯಲ್ಲಿ ಭಾರತ ಎಂದಿಗೂ ಗೆಲುವು ದಾಖಲಿಸಿಲ್ಲ. ಹೀಗಾಗಿ, ಈ ಸರಣಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ನಡೆದ ಕಾರಣ ಟೀಂ ಇಂಡಿಯಾದ ಕೆಲ ಹಿರಿಯ ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ, ಯುವಕರಿಂದಲೇ ಕೂಡಿರುವ ಭಾರತ ತಂಡ ಗೆಲುವು ಸಾಧಿಸಿ, ಹೊಸ ಇತಿಹಾಸ ರಚನೆ ಮಾಡುವ ತವಕದಲ್ಲಿದೆ. ತಂಡಕ್ಕೆ ಕೋಚ್ ರಾಹುಲ್ ದ್ರಾವಿಡ್ ಸಾರಥ್ಯವಿದ್ದು, ದಿನೇಶ್ ಕಾರ್ತಿಕ್, ರಿಷಭ್ ಪಂತ್ ಸೇರಿದಂತೆ ಕೆಲ ಟಿ20 ಸ್ಪೆಷಲಿಸ್ಟ್ಗಳಿಗೆ ಬಿಸಿಸಿಐ ಮಣೆ ಹಾಕಿದೆ. ಈ ಸರಣಿಯಲ್ಲಿ ಭಾರತ ಗೆಲುವು ದಾಖಲು ಮಾಡಿದ್ರೆ, ಹೊಸ ಐತಿಹಾಸ ನಿರ್ಮಾಣವಾಗಲಿದೆ.
ಟೀಂ ಇಂಡಿಯಾ ಇದುವರೆಗೆ ಸತತ 12 ಟಿ-20 ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಿದೆ. ಒಂದು ವೇಳೆ ದೆಹಲಿಯಲ್ಲಿನ ಮೊದಲ ಪಂದ್ಯ ಗೆದ್ದರೆ 13ನೇ ಪಂದ್ಯ ಗೆಲ್ಲುವುದರ ಜೊತೆಗೆ ಟಿ-20 ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನ ಸತತವಾಗಿ ಗೆದ್ದಿರುವ ದಾಖಲೆ ಬರೆಯಲಿದೆ. ವಿಶೇಷ ಎಂದರೆ ಭಾರತದಲ್ಲಿ ಟೀಂ ಇಂಡಿಯಾ ಇದುವರೆಗೆ ಹರಿಣಗಳ ವಿರುದ್ಧ ಟಿ-20 ಸರಣಿ ಗೆದ್ದಿಲ್ಲ. ಈ ಹಿಂದೆ ದಕ್ಷಿಣ ಆಫ್ರಿಕಾ ಎರಡು ಸಲ ಭಾರತದ ಪ್ರವಾಸ ಕೈಗೊಂಡಿದ್ದು, ಎರಡರಲ್ಲೂ ಭಾರತ ಸರಣಿ ಕೈಚೆಲ್ಲಿದೆ. ಇದೀಗ ಉಭಯ ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗುತ್ತಿವೆ.
ಇದನ್ನೂ ಓದಿ:ಹರಿಣಗಳ ವಿರುದ್ಧ ಟಿ - 20 ಸರಣಿ: ಜೂ. 5ರಂದು ದೆಹಲಿಯಲ್ಲಿ ಒಗ್ಗೂಡಲಿದೆ ಟೀಂ ಇಂಡಿಯಾ
ಈ ಹಿಂದೆ 2015/16ರಲ್ಲಿ ದಕ್ಷಿಣ ಆಫ್ರಿಕಾ-ಭಾರತ ಮೂರು ಟಿ-20 ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಿದ್ದವು. ಇದರಲ್ಲಿ ಹರಿಣಗಳ ತಂಡ 2-0 ಅಂತರದಿಂದ ಗೆಲುವು ದಾಖಲು ಮಾಡಿತ್ತು. ಇದಾದ ಬಳಿಕ ಎರಡನೇ ಸಲ 2019/20ರಲ್ಲಿ ಮೂರು ಟಿ-20 ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಲು ಆಫ್ರಿಕಾ ತಂಡ ಭಾರತಕ್ಕೆ ಬಂದಿತ್ತು. ಅಲ್ಲಿ ಸರಣಿ ಸಮಬಲಗೊಂಡಿತ್ತು.ಇದೀಗ ಉಭಯ ತಂಡಗಳ ನಡುವೆ ಜೂನ್ 9ರಂದು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಮೊದಲ ಟಿ20 ನಡೆಯಲಿದ್ದು, ತದನಂತರ ಕ್ರಮವಾಗಿ ಕಟಕ್, ವಿಶಾಖಪಟ್ಟಣಂ, ರಾಜ್ಕೋಟ್ ಹಾಗೂ ಬೆಂಗಳೂರಿನಲ್ಲಿ ಪಂದ್ಯ ಆಯೋಜನೆಗೊಂಡಿವೆ.
ಭಾರತ ತಂಡ: ಕೆಎಲ್ ರಾಹುಲ್ (ನಾಯಕ), ರಿತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ಉಪನಾಯಕ,ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್.
ದಕ್ಷಿಣ ಆಫ್ರಿಕಾ ತಂಡ:ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಹೆನ್ರಿಕ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಎನ್ರಿಕ್ ನಾರ್ಟ್ಜೆ, ವೇಯ್ನ್ ಪಾರ್ನೆಲ್, ಡ್ವೇನ್ ಪ್ರಿಟೋರಿಯಸ್, ಟ್ರಿಸ್ಟಾನ್, ಕಗಿಸೊ ರಾಬ್ಸ್, ಸೇಂಟ್ ಟ್ರಿಸ್ಟಾನ್ ರೊಸ್ಸಿ ವ್ಯಾನ್ ಡೆರ್ ಡಸ್ಸೆನ್ ಮತ್ತು ಮಾರ್ಕೊ ಜೆನ್ಸನ್