ಸೆಂಚುರಿಯನ್ (ದಕ್ಷಿಣ ಆಫ್ರಿಕಾ):ನಿವೃತ್ತಿಯ ಸರಣಿಯ ಕೊನೆಯ ಪಂದ್ಯಕ್ಕೆ ಡೀನ್ ಎಲ್ಗರ್ಗೆ ನಾಯಕತ್ವ ಒಲಿದಿದೆ. ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ ಗಾಯಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ಸ್ಟಾಂಡ್ ಬೈ ಕ್ಯಾಪ್ಟನ್ ಆಗಿ ಡೀನ್ ಎಲ್ಗರ್ ಅವರನ್ನು ಘೋಷಿಸಲಾಗಿದೆ.
ದಕ್ಷಿಣ ಆಫ್ರಿಕಾ ಕ್ರಿಕೆಟ್ ಸಂಸ್ಥೆ ಭಾರತ ವಿರುದ್ಧದ ಎರಡನೇ ಟೆಸ್ಟ್ಗೆ ಕೆಲ ಬದಲಾವಣೆಗಳನ್ನು ಮಾಡಿಕೊಂಡು ತಂಡವನ್ನು ಪ್ರಕಟಿಸಿದೆ. ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಜೆರಾಲ್ಡ್ ಕೊಯೆಟ್ಜಿ ಮೊದಲ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿ ತಂಡದಿಂದ ಹೊರಗುಳಿದಿದ್ದಾರೆ. ಅವರ ಬದಲಿ ಯಾವುದೇ ಆಟಗಾರನನ್ನು ಸಂಸ್ಥೆ ಪ್ರಕಟಿಸಿಲ್ಲ.
ಕೋಟ್ಜಿಗೆ ಗಾಯ: ಸೆಂಚುರಿಯನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಕೋಟ್ಜಿ ಗಾಯಕ್ಕೆ ತುತ್ತಾದರು. ಶುಕ್ರವಾರ ಅವರನ್ನು ಸ್ಕ್ಯಾನ್ಗೆ ಕಳಿಸಲಾಗಿದ್ದು, ಗಂಭೀರ ಗಾಯಗೊಂಡಿರುವುದು ತಿಳಿದು ಬಂದಿದೆ. ಇದರಿಂದ ಎರಡನೇ ಟೆಸ್ಟ್ನಿಂದ ಅವರನ್ನು ಕೈಬಿಡಲಾಗಿದೆ ಎಂದು ಹರಿಣಗಳ ತಂಡದ ಕೋಚ್ ಕಾನ್ರಾಡ್ ತಿಳಿಸಿದ್ದಾರೆ. ಅಲ್ಲದೇ ಜನವರಿ 10 ರಿಂದ ಪ್ರಾರಂಭವಾಗುವ ಟಿ20 ಲೀಗ್ಗೂ ಅಲಭ್ಯರಾಗುವ ಸಾಧ್ಯತೆ ಇದೆ. ಮೂರನೇ ದಿನ ಐದು ಓವರ್ ಮಾಡಿದ ಕೋಟ್ಜಿ ಗಾಯಕ್ಕೆ ತುತ್ತಾಗಿ ಮೈದಾನದಿಂದ ಹೊರ ನಡೆದರು. ಟ್ರಿಸ್ಟಾನ್ ಸ್ಟಬ್ಸ್ ಅವರ ಬದಲಿಯಾಗಿ ಕ್ಷೇತ್ರ ರಕ್ಷಣೆಯಲ್ಲಿ ಭಾಗಿಯಾದರು.
ಮತ್ತೆ ಗಾಯಕ್ಕೆ ತುತ್ತಾದ ಬವುಮಾ: ಏಕದಿನ ವಿಶ್ವಕಪ್ನಲ್ಲಿ ಗಾಯಕ್ಕೆ ತುತ್ತಾಗಿದ್ದ ತೆಂಬಾ ಬವುಮಾ ಚೇತರಿಸಿಕೊಂಡು ಟೆಸ್ಟ್ ತಂಡಕ್ಕೆ ಮರಳಿದ್ದರು. ಭಾರತದ ವಿರುದ್ಧದ ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಗಾಯದ ಕಾರಣಕ್ಕೆ ಬವುಮಾ ಆಯ್ಕೆ ಆಗಿರಲಿಲ್ಲ. ಈಗ ಮೈದಾನಕ್ಕಿಳಿಯುತ್ತಿದ್ದಂತೆ ಮತ್ತೆ ಗಾಯಕ್ಕೆ ತುತ್ತಾಗಿದ್ದಾರೆ.
ಎಲ್ಗರ್ಗೆ ನಾಯಕತ್ವ:ಬವುಮಾ ಅನುಪಸ್ಥಿತಿಯಲ್ಲಿ ತಂಡದ ಹಿರಿಯ ಆಟಗಾರ ಡೀನ್ ಎಲ್ಗರ್ಗೆ ಮುಂದಿನ ಟೆಸ್ಟ್ನ ಮುಂದಾಳತ್ವದಲ್ಲಿ ಹೊಣೆ ಸಿಕ್ಕಿದೆ. ಈ ನಾಯಕತ್ವದ ಜವಾಬ್ದಾರಿಯಲ್ಲಿ ವಿಶೇಷತೆಯೂ ಇದೆ. ಭಾರತದ ವಿರುದ್ಧದ ಸರಣಿಯ ನಂತರ ಕೆಂಪು ಬಾಲ್ ಕ್ರಿಕೆಟ್ನಿಂದ ನಿವೃತ್ತಿಯನ್ನು ಪಡೆಯುವುದಾಗಿ ಎಲ್ಗರ್ ಹೇಳಿದ್ದರು. ಕ್ರಿಕೆಟ್ಗೆ ವಿದಾಯದ ಘೋಷಿಸುತ್ತಿರುವ ಪಂದ್ಯದಲ್ಲಿ ಎಲ್ಗರ್ಗೆ ಮರಳಿ ದೇಶದ ತಂಡದ ನಾಯಕತ್ವ ವಹಿಸುವ ಸುವರ್ಣಾವಕಾಶ ಒಲಿದಿದೆ.
ದಕ್ಷಿಣ ಆಫ್ರಿಕಾ ತಂಡ:ಡೀನ್ ಎಲ್ಗರ್ (ನಾಯಕ), ಐಡೆನ್ ಮಾರ್ಕ್ರಾಮ್, ಟೋನಿ ಡಿ ಜೊರ್ಜಿ, ಡೇವಿಡ್ ಬೆಡಿಂಗ್ಹ್ಯಾಮ್, ಕೈಲ್ ವೆರ್ರೆನ್ (ಡಬ್ಲ್ಯೂ), ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಲುಂಗಿ ಎನ್ಗಿಡಿ, ಕೀಗನ್ ಪೀಟರ್ಸನ್, ವಿಯಾನ್ ಮುಲ್ಡರ್, ನಾಂದ್ರೆ ಬರ್ಗರ್, ಟ್ರಿಸ್ಟಾನ್ ಸ್ಟಬ್ಸ್, ಜುಬೇರ್ ಹಮ್ಜಾ
ಇದನ್ನೂ ಓದಿ:ಶುಭಮನ್ ಗಿಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ತುಂಬಾ ಆಕ್ರಮಣಕಾರಿಯಾಗಿ ಆಡುತ್ತಿದ್ದಾರೆ: ಗವಾಸ್ಕರ್