ಕೇಪ್ಟೌನ್:ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಅವರ ಆಕರ್ಷಕ ಶತಕ(124) ಹಾಗೂ ವಾನ್ಡರ್ ಡಸೆನ್ ಅವರ ಅರ್ಧಶತಕದ ಬಲದಿಂದ ದಕ್ಷಿಣ ಆಫ್ರಿಕಾ ತಂಡವು ಭಾರತಕ್ಕೆ 288 ರನ್ಗಳ ಗೆಲುವಿನ ಗುರಿ ನೀಡಿದೆ.
ಟೆಸ್ಟ್ ಸರಣಿ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಈಗಾಗಲೇ 2-0ದಿಂದ ಕಳೆದುಕೊಂಡಿರುವ ಭಾರತ ತಂಡ ಟಾಸ್ ಗೆದ್ದು ಹರಿಣಗಳಿಗೆ ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿತ್ತು. ಮೈದಾನಕ್ಕಿಳಿದ ದ.ಆಫ್ರಿಕಾ 70 ರನ್ ಗಳಿಸುವಷ್ಟರಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡಿತ್ತು. ಆರಂಭಿಕ ಆಟಗಾರ ಜನೆಮನ್ ಮಲನ್ (1) ಚಹರ್ ಬೌಲಿಂಗ್ನಲ್ಲಿ ಪಂತ್ಗೆ ಕ್ಯಾಚ್ ನೀಡಿದರೆ, ನಾಯಕ ತೆಂಬಾ ಬವುಮಾ (8)ರನ್ನು ರಾಹುಲ್ ರನೌಟ್ ಮಾಡಿದರು. ಬಳಿಕ ಮಾರ್ಕ್ರಮ್ 15 ರನ್ ಗಳಿಸಿ ಸಬ್ ರುತುರಾಜ್ ಗಾಯಕ್ವಾಡ್ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡಿದ್ದರು.
ಆದರೆ ಈ ಸಂದರ್ಭದಲ್ಲಿ ಒಂದಾದ ಕ್ವಿಂಟನ್ ಡಿ ಕಾಕ್ ಹಾಗೂ ಡಸೆನ್ (52) ನಾಲ್ಕನೇ 144 ರನ್ ಸೇರಿಸಿ ತಂಡಕ್ಕೆ ಆಸರೆಯಾದರು. ಭರ್ಜರಿ ಶತಕ ಬಾರಿಸಿದ ಕಾಕ್ 130 ಎಸೆತಗಳಲ್ಲಿ 124 ರನ್ ಗಳಿಸಿ ಬುಮ್ರಾ ಬೌಲಿಂಗ್ನಲ್ಲಿ ಔಟಾದರು. ಡಸೆನ್ ಅರ್ಧಶತಕದ ಬಳಿಕ ಚಹಲ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು.