ಕೇಪ್ ಟೌನ್: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹರಿಣ ಪಡೆ ಭಾರತದ ಬಿಗಿ ಬೌಲಿಂಗ್ ದಾಳಿಗೆ ಸಿಲುಕಿ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 55 ರನ್‌ಗಳಿಗೆ ಸರ್ವಪತನ ಕಂಡಿದೆ. ಈ ಪಂದ್ಯದಲ್ಲಿ ವೇಗಿ ಮೊಹ್ಮದ್ ಸಿರಾಜ್ 9 ಓವರ್ ಮಾರಕ ಬೌಲಿಂಗ್ ಮಾಡಿ 3 ಮೆಡನ್ ಸಮೇತ 15 ರನ್ನೀಡಿ 6 ವಿಕೆಟ್ ಉರುಳಿಸುವ ಮೂಲಕ ಹರಿಣಗಳ ಪಡೆಗೆ ಶಾಕ್ ನೀಡಿದ್ದಾರೆ.
ಅತ್ಯಂತ ಕಡಿಮೆ ಮೊತ್ತಕ್ಕೆ ಕುಸಿತ: ಟೆಸ್ಟ್ ಇತಿಹಾಸದಲ್ಲಿ ಭಾರತ ತಂಡದ ಎದುರು ಒಂದೇ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ ಗಳಿಸಿದ ಅತ್ಯಂತ ಅಲ್ಪಮೊತ್ತದ ಸ್ಕೋರ್ ಇದಾಗಿದೆ. ಇದಕ್ಕೂ ಮುನ್ನ 2015ರ ನವೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾರತದ ವಿರುದ್ಧದ ಟೆಸ್ಟ್ನ ಇನ್ನಿಂಗ್ಸ್ ಒಂದರಲ್ಲೇ ಅತಿ ಕಡಿಮೆ ರನ್‌ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತ್ತು. ನಂತರ ನಾಗ್ಪುರ್ ಟೆಸ್ಟ್‌ನಲ್ಲಿ ಆಫ್ರಿಕಾ ತಂಡ 79 ರನ್‌ಗಳಿಗೆ ಆಲೌಟ್ ಆಗಿತ್ತು.
ಕೇಪ್ ಟೌನ್‌ನಲ್ಲಿ ಭಾರತದ ದಾಖಲೆ: ಕೇಪ್ ಟೌನ್‌ನಲ್ಲಿ ಭಾರತ ತಂಡ ಇದುವರೆಗೆ ಯಾವುದೇ ಟೆಸ್ಟ್ ಪಂದ್ಯವನ್ನು ಗೆದ್ದಿಲ್ಲ. ಇಲ್ಲಿ ಆಡಿದ 6 ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾ 4ರಲ್ಲಿ ಸೋತಿದ್ದು, ಇನ್ನೆರಡು ಟೆಸ್ಟ್‌ಗಳು ಡ್ರಾ ನಲ್ಲಿ ಮುಕ್ತಾಯಗೊಂಡಿವೆ. ಇದೀಗ 2024ರಲ್ಲಿ ಕೇಪ್ ಟೌನ್‌ನಲ್ಲಿ ಮೊದಲ ಟೆಸ್ಟ್ ಆಡುತ್ತಿರುವ ಟೀಮ್ ಇಂಡಿಯಾ ಈ ಪಂದ್ಯ ಗೆದ್ದು ದಾಖಲೆ ಬರೆಯುವ ಅವಕಾಶ ಸಿಕ್ಕಿದೆ.