ರಾಂಚಿ:ಇಲ್ಲಿನ ಜೆಎಸ್ಸಿಎ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಭಾರತಕ್ಕೆ 279 ರನ್ಗಳ ಗೆಲುವಿನ ಗುರಿ ನೀಡಿದೆ.
ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆಯಲ್ಲಿರುವ ಹರಿಣಗಳ ತಂಡ ರಾಂಚಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿತು. ಮಧ್ಯಮ ಕ್ರಮಾಂಕದ ಬ್ಯಾಟರ್ಗಳಾದ ಐಡೆನ್ ಮಾರ್ಕ್ರಮ್(79) ಮತ್ತು ರೀಜಾ ಹೆಂಡ್ರಿಕ್ಸ್(74) ಅವರ ಅರ್ಧಶತಕಗಳ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 278 ರನ್ ಪೇರಿಸಿದೆ.
ಇನ್ನುಳಿದಂತೆ ವಿಕೆಟ್ ಕೀಪರ್ ಬ್ಯಾಟರ್ ಡಿ ಕಾಕ್ 5, ಜಾನೆಮನ್ ಮಲನ್ 25, ಕ್ಲಾಸಿನ್ 30, ಡೇವಿಡ್ ಮಿಲ್ಲರ್ ಅಜೇಯ 35 ಹಾಗೂ ವೇಯ್ನ್ ಪಾರ್ನೆಲ್ 16 ರನ್ ಬಾರಿಸಿದರು. ತಂಡದ ನಾಯಕ ಕೇಶವ್ ಮಹಾರಾಜ್ 5 ರನ್ ಗಳಿಸಿದರು. ಭಾರತದ ಪರ ಸಿರಾಜ್ 3 ವಿಕೆಟ್ ಪಡೆದರೆ, ಸುಂದರ್, ಶಹ್ಬಾಜ್ ಅಹಮದ್, ಕುಲದೀಪ್ ಯಾದವ್ ಹಾಗೂ ಶಾರ್ದುಲ್ ಠಾಕೂರ್ ತಲಾ ಒಂದು ವಿಕೆಟ್ ಕಬಳಿಸಿದರು.
ಇದಕ್ಕೂ ಮುನ್ನ ಲಖನೌನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 9 ರನ್ಗಳಿಂದ ದಕ್ಷಿಣ ಆಫ್ರಿಕಾ ತಂಡ ಗೆಲುವು ದಾಖಲಿಸಿದೆ. ಸರಣಿ ಜೀವಂತವಾಗಿರಿಕೊಳ್ಳಬೇಕಾದರೆ ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ.
ಇದನ್ನೂ ಓದಿ:ಪುಟ್ಟ ಅಭಿಮಾನಿಯ ಸಾವಿಗೆ ಮರುಗಿದ ದಕ್ಷಿಣ ಆಫ್ರಿಕಾ ಕ್ರಿಕೆಟರ್ ಡೇವಿಡ್ ಮಿಲ್ಲರ್