ಸೇಂಟ್ ಜಾರ್ಜ್ (ಗ್ರೆನೆಡಾ): ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ 5 ಪಂದ್ಯಗಳ ಟಿ-20 ಸರಣಿಯ 3ನೇ ಪಂದ್ಯದಲ್ಲಿ ದ.ಆಫ್ರಿಕಾಗೆ ರೋಚಕ ಗೆಲುವು ದಾಖಲಿಸಿದೆ. ಈ ಗೆಲುವಿನ ಮೂಲಕ ಸರಣಿಯಲ್ಲಿ ಸೌತ್ ಆಫ್ರಿಕಾ 2-1 ಪಾಯಿಂಟುಗಳ ಮುನ್ನಡೆ ಸಾಧಿಸಿದೆ.
ಟಾಸ್ ಗೆದ್ದ ವಿಂಡೀಸ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬಳಿಕ ಬ್ಯಾಟಿಂಗ್ಗೆ ಇಳಿದ ದಕ್ಷಿಣ ಆಫ್ರಿಕಾ ಮೊದಲ ವಿಕೆಟ್‌ಗೆ ರೀಜಾ ಹೆಂಡ್ರಿಕ್ಸ್ (17) ಮತ್ತು ಕ್ವಿಂಟನ್ ಡಿ ಕಾಕ್ (72) 42 ರನ್ ಗಳಿಸಿದರು. ಮಿಂಚಿನ ಆಟವಾಡಿದ ಡಿ ಕಾಕ್ ಅರ್ಧಶತಕ ಸಿಡಿಸಿದರು. 51 ಎಸೆತಗಳಲ್ಲಿ 5 ಬೌಂಡರಿ ಎರಡು ಭರ್ಜರಿ ಸಿಕ್ಸರ್ ನೆರವಿನಿಂದ 72 ರನ್ ಗಳಿಸಿದರು. ವ್ಯಾನ್ ಡೆರ್ ಡುಸೆನ್ 24 ಎಸೆತಗಳಲ್ಲಿ 36 ರನ್ ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸುವಲ್ಲಿ ನೆರವಾದರು. ಅಂತಿಮವಾಗಿ ಸೌತ್ ಆಫ್ರಿಕಾ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 167 ರನ್ಗಳಿಸಿತು.
ಈ ಗುರಿ ಬೆನ್ನತ್ತಿದ ಆತಿಥೇಯ ತಂಡದ ಎವಿನ್ ಲೂಯಿಸ್ (27) ಮತ್ತು ಸಿಮೋನ್ಸ್ (22) ಮೊದಲ ವಿಕೆಟ್‌ಗೆ 55 ರನ್ಗಳ ಜೊತೆಯಾಟವಾಡಿದರು. ನಂತರ ಕ್ರೀಸಿಗೆ ಬಂದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳು ರನ್ ಗಳಿಸಲು ಪರದಾಡಿದರು. ಕೊನೆಯಲ್ಲಿ ಆ್ಯಂಡ್ರೆ ರಸೆಲ್ (25) ನಿಕೋಲಸ್ ಪೂರನ್ (27) ರನ್ಗಳಿಸಿ ಕೊನೆಯಲ್ಲಿ ಹೋರಾಡಿದರೂ ತಂಡಕ್ಕೆ ಜಯ ತಂದುಕೊಡಲಾಗಲಿಲ್ಲ.