ಜೋಹನ್ಸ್ಬರ್ಗ್:ಭಾರತದ ವಿರುದ್ಧ ನಡೆಯುವ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಭಾನುವಾರ 17 ಸದಸ್ಯರ ತಂಡವನ್ನು ಪ್ರಕಟಿಸಿದೆ.
ಟೆಸ್ಟ್ ತಂಡದಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಮಾರ್ಕೊ ಜಾನ್ಸನ್ ಏಕದಿನ ಕ್ರಿಕೆಟ್ನಲ್ಲೂ ಮೊದಲ ಬಾರಿ ಅವಕಾಶ ಪಡೆದಿದ್ದಾರೆ . ಟೆಂಬ ಬವುಮಾ ನಾಯಕನ ಸ್ಥಾನಕ್ಕೆ ಮರಳಿದ್ದಾರೆ. ವೇಯ್ನ್ ಪಾರ್ನೆಲ್ , ರಿಯಾನ್ ರಿಕೆಲ್ಟನ್, ಸಿಸಂಡಾ ಮಗಾಲಾ ಮತ್ತು ಜುಬೇರ್ ಹಮ್ಜಾ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ವರ್ಷದ ಏಕದಿನ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ಜನ್ನೆಮಾನ್ ಮಲನ್, ಡೇವಿಡ್ ಮಿಲ್ಲರ್, ಆ್ಯಂಡಿಲೆ ಪೆಹ್ಲುಕ್ವಾಯೋ, ಡ್ವೇನ್ ಪ್ರಿಟೋರಿಯಸ್ ಹಾಗೂ ಟಿ20 ಕ್ರಿಕೆಟ್ನಲ್ಲಿ 2ನೇ ಶ್ರೇಯಾಂಕದಲ್ಲಿರುವ ತಬ್ರೈಜ್ ಶಮ್ಸಿ ಏಕದಿನ ತಂಡದಲ್ಲಿರುವ ಸ್ಟಾರ್ ಆಟಗಾರರಾಗಿದ್ದಾರೆ.
ಗಾಯದ ಕಾರಣ ಟೆಸ್ಟ್ ಸರಣಿಯಿಂದ ಹೊರಬಿದ್ದಿರುವ ಎನ್ರಿಚ್ ನಾರ್ಕಿಯಾ ಏಕದಿನ ತಂಡದಿಂದಲೂ ಹೊರಬಿದ್ದಿದ್ದಾರೆ. ಮೊದಲ ಟೆಸ್ಟ್ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿರುವ ಕಗಿಸೋ ರಬಾಡ ಮತ್ತು ಲುಂಗಿ ಎಂಗಿಡಿ ಕೂಡ ಇದ್ದಾರೆ.