ಜೋಹಾನ್ಸ್‌ಬರ್ಗ್(ದಕ್ಷಿಣ ಆಫ್ರಿಕಾ): ಡಿಸೆಂಬರ್ 10 ರಿಂದ ಟೀಮ್ ಇಂಡಿಯಾ ವಿರುದ್ಧದ ತವರಿನ ಸರಣಿಗಳಿಗೆ ಹರಿಣಗಳ ತಂಡ ಪ್ರಕಟವಾಗಿದೆ. ದಕ್ಷಿಣ ಆಫ್ರಿಕಾದ ನಾಯಕ ತೆಂಬಾ ಬವುಮಾ ಮತ್ತು ವೇಗಿ ಕಗಿಸೊ ರಬಾಡ ಅವರಿಗೆ ಸರಣಿಯ ವೈಟ್ ಬಾಲ್ ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗಿದ್ದು, ಎರಡು ಟೆಸ್ಟ್‌ಗೆ ತಂಡಕ್ಕೆ ಮರಳಿದ್ದಾರೆ.
ವೇಗದ ಬೌಲರ್ ನಾಂಡ್ರೆ ಬರ್ಗರ್ ಮತ್ತು ಬ್ಯಾಟರ್‌ಗಳಾದ ಡೇವಿಡ್ ಬೆಡಿಂಗ್ಹ್ಯಾಮ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಅವರು ಭಾರತ ಸರಣಿಗಾಗಿ ದಕ್ಷಿಣ ಆಫ್ರಿಕಾದ ಟೆಸ್ಟ್ ತಂಡಕ್ಕೆ ಪಾದಾರ್ಪಣೆಯ ಪಂದ್ಯವನ್ನು ಆಡಲಿದ್ದಾರೆ. ವಿಕೆಟ್ ಕೀಪರ್ ಕೈಲ್ ವೆರ್ರೆನ್ ಅವರು ತಂಡಕ್ಕೆ ಸೇರ್ಪಡೆ ಆಗಿದ್ದಾರೆ. ತೆಂಬಾ ಬವುಮಾ ಅನುಪಸ್ಥಿತಿಯಲ್ಲಿ ಐಡೆನ್ ಮಾರ್ಕ್ರಾಮ್ ಟಿ20 ಮತ್ತು ಏಕದಿನ ತಂಡಗಳನ್ನು ಮುನ್ನಡೆಸಲಿದ್ದಾರೆ.
ಬೆನ್ನಿನ ಒತ್ತಡದ ಮುರಿತದಿಂದಾಗಿ ವಿಶ್ವಕಪ್‌ನಿಂದ ಹೊರಗುಳಿದ ಅನ್ರಿಚ್ ನಾರ್ಟ್ಜೆ ಎಲ್ಲಾ ಸ್ವರೂಪದ ಆಟದಿಂದ ಹೊರಗುಳಿದಿದ್ದಾರೆ. ಬ್ಯಾಟರ್ ಡೇವಿಡ್ ಬೆಡಿಂಗ್ಹ್ಯಾಮ್ ಮತ್ತು ವೇಗದ ಬೌಲರ್ ನಾಂಡ್ರೆ ಬರ್ಗರ್ ಅವರೊಂದಿಗೆ ವೇಗದ ಬೌಲರ್ ಟ್ರಿಸ್ಟಾನ್ ಸ್ಟಬ್ಸ್ ಅವರನ್ನು ಮೊದಲ ಬಾರಿಗೆ ಟೆಸ್ಟ್ ತಂಡಕ್ಕೆ ಸೇರಿಸಲಾಗಿದೆ.
ಡಿಸೆಂಬರ್ 10 ರಂದು ಕಿಂಗ್ಸ್‌ಮೀಡ್ ಸ್ಟೇಡಿಯಂನಲ್ಲಿ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಎರಡನೇ ಟಿ20 ಡಿ. 12 ರಂದು ಸೇಂಟ್ ಜಾರ್ಜ್ ಓವಲ್ ಮತ್ತು ಕೊನೆಯ ಪಂದ್ಯ ಡಿ.14 ರಂದು ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. 50 ಓವರ್‌ಗಳ ಪಂದ್ಯ ಡಿಸೆಂಬರ್ 17 ರಂದು ವಾಂಡರರ್ಸ್ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ. ಎರಡನೇ ಮತ್ತು ಅಂತಿಮ ಏಕದಿನ ಪಂದ್ಯವು ಕ್ರಮವಾಗಿ ಡಿಸೆಂಬರ್ 19 ಮತ್ತು ಡಿಸೆಂಬರ್ 21 ರಂದು ನಡೆಯಲಿದೆ.