ಹೈದರಾಬಾದ್:ಕಳೆದ ಕೆಲವು ದಿನಗಳ ಹಿಂದೆ ದಾದಾ ಸೌರವ್ ಗಂಗೂಲಿ ಅವರ ಜೀವನ ಹಾಗೂ ಕ್ರಿಕೆಟ್ ಹಾದಿ ಬಗ್ಗೆ ಬಯೋಪಿಕ್ ಆಗಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಗಾಳಿ ಸುದ್ದಿಯೊಂದು ಹರಿದಾಡುತ್ತಿತ್ತು. ಈಗ ಇದಕ್ಕೆ ಸ್ಪಷ್ಟನೆ ಸಿಕ್ಕಿದೆ. ಸ್ವತಃ ಗಂಗೂಲಿ ಅವರೇ ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನನ್ನ ಕ್ರಿಕೆಟ್ ಪ್ರಯಾಣ ಸಿನಿಮಾ ಆಗುತ್ತಿದೆ. ಲವ್ ಫಿಲಂಸ್ ಎಂಬ ಸಂಸ್ಥೆ ನನ್ನ ಕಥೆಯನ್ನು ನಿರ್ಮಿಸುತ್ತಿರುವುದು ಖುಷಿಯಾಗಿದೆ. ಕ್ರಿಕೆಟ್ ನನ್ನ ಉಸಿರು. ನನ್ನನ್ನು ಈ ಮಟ್ಟಕ್ಕೆ ತಂದಿದ್ದು ಇದೇ ಕ್ರೀಡೆ. ಈ ಕ್ರೀಡೆಯು ನನಗೆ ತಲೆ ಎತ್ತಿ ಮುನ್ನಡೆಯಲು ಬೇಕಾದ ಆತ್ಮವಿಶ್ವಾಸ ಹಾಗೂ ಸಾಮರ್ಥ್ಯ ನೀಡಿದೆ. ಇದೀಗ ಅದೇ ಕಥೆಯನ್ನು ಲವ್ ಫಿಲಂಸ್ ಚಿತ್ರವಾಗಿಸುತ್ತಿದೆ. ನನ್ನ ಜೀವನವನ್ನು ದೊಡ್ಡ ಪರದೆಯಲ್ಲಿ ತೋರಿಸುತ್ತಿರುವ ಬಗ್ಗೆ ನಾನು ಕೂಡ ಥ್ರಿಲ್ ಆಗಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ಲವ್ ಫಿಲಂಸ್ ಸಂಸ್ಥೆ ಕೂಡ ಟ್ವೀಟ್ ಮಾಡಿ ಈ ಬಗ್ಗೆ ಹರ್ಷ ವ್ಯಕ್ತಪಡಿಸಿದೆ. ಸೌರವ್ ಗಂಗೂಲಿ ಅವರ ಜೀವನಾಧಾರಿತ ಕಥೆಗೆ ಆರ್ಥಿಕ ಬಂಡವಾಳ ಹೂಡಲಿದ್ದೇವೆ ಎಂದು ತಿಳಿಸಲು ಥ್ರಿಲ್ ಆಗಿದ್ದೇವೆ. ಈ ಜವಾಬ್ದಾರಿಯನ್ನು ವಹಿಸಿಕೊಂಡಿರುವುದಕ್ಕೆ ನಮಗೆ ಗೌರವವಿದೆ. ಉತ್ತಮ ಇನ್ನಿಂಗ್ಸ್‌ಗಾಗಿ ಎದುರು ನೋಡುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ
ಫ್ಲೈಯಿಂಗ್ ಸಿಖ್ ಮಿಲ್ಕಾ ಸಿಂಗ್, ಬ್ಯಾಡ್ಮಿಂಟನ್ ಚಾಂಪಿಯನ್ ಸೈನಾ ನೆಹ್ವಾಲ್, ಕುಸ್ತಿಪಟು ಗೀತಾ ಫೋಗಾಟ್, ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್, ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ, ಮೊಹಮ್ಮದ್ ಅಜರುದ್ದೀನ್, ಹಾಕಿ ಆಟಗಾರ ಸಂದೀಪ್ ಸಿಂಗ್ ಮೊದಲಾದವರ ಬಯೋಪಿಕ್ಗಳು ಬಾಲಿವುಡ್ನಲ್ಲಿ ನಿರ್ಮಾಣವಾಗಿ ಗಮನ ಸೆಳೆದಿವೆ. ಈಗ ಸೌರವ್ ಗಂಗೂಲಿ ಅವರ ಬಯೋಪಿಕ್ ಕೂಡ ಈ ಸಾಲಿಗೆ ಸೇರುತ್ತಿದೆ.
ಆದರೆ, ಚಿತ್ರದಲ್ಲಿ ಗಂಗೂಲಿ ಅವರ ಪಾತ್ರಕ್ಕೆ ಯಾರು ಬಣ್ಣ ಹಚ್ಚಲಿದ್ದಾರೆ ಅನ್ನೋದು ಮಾತ್ರ ಇನ್ನೂ ಖಚಿತವಾಗಿಲ್ಲ. ರಣಬೀರ್ ಕಪೂರ್ ಅವರು ಗಂಗೂಲಿ ಪಾತ್ರ ಮಾಡುವ ಸಾಧ್ಯತೆ ಎಂಬ ಗಾಳಿ ಸುದ್ದಿ ಇದೆ.