ಮುಂಬೈ : ರವಿಶಾಸ್ತ್ರಿಯಿಂದ ತೆರವಾದ ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಯನ್ನು ಅಲಂಕರಿಸಲು ರಾಹುಲ್ ದ್ರಾವಿಡ್ರನ್ನು ಸತತ ಎರಡು ವರ್ಷಗಳ ಕಾಲ ಒತ್ತಾಯ ಮಾಡಲಾಗಿತ್ತು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬಹಿರಂಗಪಡಿಸಿದ್ದಾರೆ.
ತುಂಬಾ ದಿನಗಳಿಂದ ರಾಹುಲ್ ದ್ರಾವಿಡ್ ಅವರು ಭಾರತ ತಂಡದ ಮುಖ್ಯ ಕೋಚ್ ಆಗಬೇಕೆಂಬುದು ನನ್ನ ಮನಸ್ಸನಲ್ಲಿತ್ತು. ಇದರ ಕುರಿತಾಗಿ ನಾನು ಜಯ್ ಶಾ ಅವರೊಂದಿಗೂ ಮಾತನಾಡಿದ್ದೆ.
ಆದರೆ, ವರ್ಷದಲ್ಲಿ 8 ರಿಂದ 10 ತಿಂಗಳ ಕಾಲ ಮನೆಯಿಂದ ಹೊರಗುಳಿಯಬೇಕಾಗಿದ್ದರಿಂದ ಈ ಹುದ್ದೆಗೆ ರಾಹುಲ್ ದ್ರಾವಿಡ್ ಅವರು ಒಪ್ಪಿರಲಿಲ್ಲ. ಏಕೆಂದರೆ, ಇಬ್ಬರು ಚಿಕ್ಕ ಮಕ್ಕಳನ್ನು ಹೊಂದಿರುವ ಕಾರಣ ಅವರು ನಮ್ಮ ಒತ್ತಾಯಕ್ಕೆ ಮಣಿದಿರಲಿಲ್ಲ ಎಂದು ಖಾಸಗಿ ಕಾರ್ಯಕ್ರಮವೊಂದರಲ್ಲಿ ಗಂಗೂಲಿ ಭಾನುವಾರ ಹೇಳಿದ್ದಾರೆ.
"ಅವರ ಮನಪರಿರ್ತಿಸುತ್ತೇವೆಂಬ ಉದ್ದೇಶದಿಂದ ಅವರನ್ನು ಸಂದರ್ಶನ ಮಾಡಿದೆವು. ಅವರು ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ನಿರ್ದೇಶಕರ ಹುದ್ದೆಯನ್ನು ಅಲಂಕರಿಸಿದ್ದರು. ಇದರ ಹೊರತಾಗಿಯೂ ನಾವು ದ್ರಾವಿಡ್ ಅವರನ್ನು ಭಾರತದ ಕೋಚ್ ಹುದ್ದೆಗೇರುವಂತೆ ಒತ್ತಾಯಿಸುತ್ತಲೇ ಇದ್ದೆವು " ಎಂದು ದಾದಾ ಹೇಳಿದ್ದಾರೆ.
ಆಟಗಾರರ ಬಯಕೆ ಕೂಡ ಅವರೇ ಆಗಿದ್ದರು :ನಾವು ಭಾರತ ತಂಡದ ಆಟಗಾರರನ್ನು ಯಾವ ಬಗೆಯ ವ್ಯಕ್ತಿತ್ವವುಳ್ಳವರನ್ನ ಬಯಸುತ್ತಿದ್ದೀರೆಂದು ಕೇಳಿದ್ದೆವು. ಅವರೆಲ್ಲರೂ ಕೂಡ ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಹುದ್ದೆಗೆ ಬರಬೇಕೆಂದು ಬಯಸಿದ್ದರು. ಈ ವಿಚಾರವನ್ನು ಸ್ವತಃ ನಾನೇ ಕರೆ ಮಾಡಿ ರಾಹುಲ್ಗೆ ತಿಳಿಸಿದ್ದೆ.
ಕೊನೆ ಪಕ್ಷ ಎರಡು ವರ್ಷದ ಅವಧಿಗಾದರೂ ಪ್ರಯತ್ನಿಸು ಎಂದು ಮನವಿ ಮಾಡಿದ ಬಳಿಕ ಆತ ನಮ್ಮ ಆಫರ್ ಒಪ್ಪಿಕೊಂಡರು " ಎಂದು ದ್ರಾವಿಡ್ ಕೋಚ್ ಅಲಂಕರಿಸಲು ತಾವು ಮಾಡಿದ ಪ್ರಯತ್ನಗಳನ್ನ ಬಹಿರಂಗಪಡಿಸಿದ್ದಾರೆ ಸೌರವ್ ಗಂಗೂಲಿ.
ನಾವು ಅಷ್ಟೆಲ್ಲಾ ಒತ್ತಾಯಿಸಿದ ಬಳಿಕ ಅವರು ಮುಖ್ಯ ಕೋಚ್ ಹುದ್ದೆಯನ್ನು ಅಲಂಕರಿಸಲು ಒಪ್ಪಿಗೆ ಸೂಚಿಸಿದರು. ದ್ರಾವಿಡ್ ತಮ್ಮ ಮನಸನ್ನು ಬದಲಿಸಿಕೊಳ್ಳುತ್ತಾರೆಂದು ನಾನು ಖಂಡಿತ ಭಾವಿಸಿರಲಿಲ್ಲ. ಆದರೆ, ರವಿ ಶಾಸ್ತ್ರಿ ಬಳಿಕ ಭಾರತ ತಂಡಕ್ಕೆ ಅತ್ಯುತ್ತಮ ಕೋಚ್ ಅನ್ನು ನೇಮಕ ಮಾಡಿದ್ದೇವೆಂಬ ಖುಷಿಯಿದೆ ಎಂದು ಬಿಸಿಸಿಐ ಬಾಸ್ ಹೇಳಿದ್ದಾರೆ.
ದ್ರಾವಿಡ್ ಭಾರತ ತಂಡದ ಅಧಿಕೃತ ಕೋಚ್ ಆದ ಬಳಿಕ ಟೀಂ ಇಂಡಿಯಾ ನ್ಯೂಜಿಲ್ಯಾಂಡ್ ವಿರುದ್ಧ 3-0ಯಲ್ಲಿ ಟಿ20 ಮತ್ತು 1-0ಯಲ್ಲಿ ಟೆಸ್ಟ್ ಸರಣಿ ಜಯಿಸಿದೆ. ಇದಕ್ಕೂ ಮುನ್ನ ದ್ರಾವಿಡ್ ಭಾರತ ಕಿರಿಯರ ತಂಡ ಮತ್ತು ಎ ತಂಡಕ್ಕೆ ಕೋಚ್ ಆಗಿದ್ದರು. 2019ರಿಂದ ಎನ್ಸಿಎ ಅಧ್ಯಕ್ಷರಾಗಿ ಪರಿಣಾಮಕಾರಿ ಬದಲಾವಣೆ ಮಾಡಿದ್ದಾರೆ ಎಂದು ಗಂಗೂಲಿ ಶ್ಲಾಘಿಸಿದ್ದಾರೆ.
ಇದನ್ನೂ ಓದಿ:ಯಾರೋ ಟೀಕಿಸುತ್ತಿದ್ದಾರೆಂದು ನಮ್ಮ ಆಟಗಾರರನ್ನ ಬಿಡುವುದಿಲ್ಲ, ಇಡೀ ತಂಡದ ಬೆಂಬಲ ಅವರಿಗಿರುತ್ತೆ: ರಹಾನೆ ಪರ ನಿಂತ ಕೊಹ್ಲಿ