ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಹೀನಾಯ ಸೋಲು ಭಾರತ ಕ್ರಿಕೆಟ್ನಲ್ಲಿ ಸಂಚಲನ ಉಂಟು ಮಾಡಿದೆ. ಇದು ರೋಹಿತ್ ಶರ್ಮಾ ನಾಯಕತ್ವದ ಮೇಲೂ ಪ್ರಶ್ನೆಗಳನ್ನು ಮೂಡಿಸಿದೆ. ಯಶಸ್ವಿ ನಾಯಕರಲ್ಲಿ ಒಬ್ಬರಾಗಿದ್ದ ವಿರಾಟ್ ಕೊಹ್ಲಿಯ ಮೇಲೆ ನಾಯಕತ್ವದ ತ್ಯಜಿಸಲು ಒತ್ತಡ ಹೇರಿದ್ದರ ಬಗ್ಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಅವರನ್ನು ಮತ್ತೆ ನಾಯಕರನ್ನಾಗಿ ಆಯ್ಕೆ ಮಾಡಬೇಕು ಎಂಬ ಒತ್ತಡ ಹೇರುತ್ತಿದ್ದಾರೆ.
ಈ ಬಗ್ಗೆ ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ, ವಿರಾಟ್ ಕೊಹ್ಲಿ ಅವರನ್ನು ಭಾರತ ಟೆಸ್ಟ್ ನಾಯಕತ್ವದಿಂದ ಕೆಳಗಿಳಿಸುವ ಯಾವುದೇ ಚಿಂತನೆ ಹೊಂದಿರಲಿಲ್ಲ. ಅವರೇ ರಾಜೀನಾಮೆ ನೀಡಿದರು. ಈ ನಿರ್ಧಾರದ ಹಿಂದಿನ ಉದ್ದೇಶ ಏನೆಂಬುದನ್ನು ಅವರೇ ಬಲ್ಲರು ಎಂದು ಹೇಳಿಕೆ ನೀಡಿದ್ದಾರೆ.
ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿದ್ದಾಗ ನಾಯಕತ್ವ ತ್ಯಜಿಸಲು ವಿರಾಟ್ ಕೊಹ್ಲಿ ಮೇಲೆ ಒತ್ತಡ ಹೇರಲಾಗಿತ್ತು ಎಂಬ ಆಪಾದನೆ ಕೇಳಿ ಬಂದಿತ್ತು. ಈ ಕುರಿತು ಇದೀಗ ಸ್ಪಷ್ಟನೆ ನೀಡಿರುವ ಗಂಗೂಲಿ, ವಿರಾಟ್ರನ್ನು ನಾಯಕತ್ವದಿಂದ ಕೆಳಗಿಳಿಯಲು ಮಂಡಳಿ ಸಿದ್ಧವಿರಲಿಲ್ಲ. ಅದು ಅವರ ವೈಯಕ್ತಿಕ ನಿರ್ಧಾರವಾಗಿತ್ತು. ದಕ್ಷಿಣ ಆಫ್ರಿಕಾ ಪ್ರವಾಸದ ಸೋಲಿನ ನಂತರ ಅವರು ಹಠಾತ್ ರಾಜೀನಾಮೆ ಘೋಷಿಸಿದರು. ನಮಗೂ ಇದು ಅನಿರೀಕ್ಷಿತವಾಗಿತ್ತು. ನಾಯಕತ್ವ ತೊರೆದ ಕಾರಣವನ್ನು ವಿರಾಟ್ ಕೊಹ್ಲಿ ಮಾತ್ರ ಬಹಿರಂಗಪಡಿಸಬೇಕು ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ ಟೆಸ್ಟ್ ತೊರೆದ ಕಾರಣದ ಬಗ್ಗೆ ಈಗ ಮಾತನಾಡುವುದರಲ್ಲಿ ಅರ್ಥವಿಲ್ಲ. ತಂಡಕ್ಕೆ ಹೊಸ ನಾಯಕನ ಆಯ್ಕೆ ಅಗತ್ಯವಾಗಿತ್ತು. ಆ ಸಮಯದಲ್ಲಿ ರೋಹಿತ್ ಶರ್ಮಾ ಅತ್ಯುತ್ತಮ ಆಯ್ಕೆಯಾಗಿದ್ದರು. ಹಾಗಾಗಿ ಅವರನ್ನು ನಾಯಕನನ್ನಾಗಿ ಪ್ರತಿಷ್ಠಾಪನೆ ಮಾಡಲಾಯಿತು ಎಂದು ಸೌರವ್ ಗಂಗೂಲಿ ಸಂದರ್ಶನದಲ್ಲಿ ಹೇಳಿದ್ದಾರೆ.