ನವದೆಹಲಿ: ಪ್ರಸ್ತುತ ವಿರಾಟ್ ಕೊಹ್ಲಿ ಹೇಳಿಕೆಯಿಂದ ಭಾರತೀಯ ಕ್ರಿಕೆಟ್ನಲ್ಲಿ ಉಂಟಾಗಿರುವ ವಿವಾದವನ್ನು ಕೊನೆಗಾಣಿಸಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸೂಕ್ತ ವ್ಯಕ್ತಿ ಎಂದು ಲೆಜೆಂಡರಿ ಬ್ಯಾಟರ್ ಸುನೀಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ವಿರಾಟ್ ಕೊಹ್ಲಿ ಟಿ-20 ನಾಯಕತ್ವ ತ್ಯಜಿಸಿದ ಒಂದೆರಡು ದಿನದ ನಂತರ ಗಂಗೂಲಿ ತಾವೂ ಕೊಹ್ಲಿ ನಾಯಕತ್ವ ತ್ಯಜಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೇಳಿಕೊಂಡಿದ್ದೆ ಎಂದಿದ್ದರು. ಆದರೆ, ಈ ಹೇಳಿಕೆಯನ್ನು ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ವಿರಾಟ್ ಅಲ್ಲಗಳೆದಿದ್ದು, ಯಾರೊಬ್ಬರು ತಮ್ಮ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಹೇಳಿರಲಿಲ್ಲ ಎಂದು ಹೇಳುವ ಮೂಲಕ ವಿವಾದಕ್ಕೆ ದಾರಿ ಮಾಡಿಕೊಟ್ಟಿದ್ದರು.
" ಕೊಹ್ಲಿಯ ಹೇಳಿಕೆಯಿಂದಾಗಿ ಬಿಸಿಸಿಐನಿಂದ ಯಾವುದೇ ಸ್ಪಷ್ಟ ಚಿತ್ರಣ ಮೂಡಿ ಬರುವುದಿಲ್ಲ. ಆದರೆ, ವಿರಾಟ್ ಕೊಹ್ಲಿಗೆ ಅಂತಹ ಸಂದೇಶವನ್ನು ರವಾನಿಸಿದ್ದರು ವ್ಯಕ್ತಿ ಯಾರು ಎಂಬುದು ಇಲ್ಲಿ ಮುಖ್ಯ ವಿಷಯ. ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರು ಮತ್ತು ಈ ಹಂತದಲ್ಲಿ ಏಕೆ ಗೊಂದಲ ಉಂಟಾಗಿದೆ ಎಂಬುವುದನ್ನ ಅವರೇ ಹೇಳಬೇಕಾದ ಅಗತ್ಯವಿದೆ. ಭಾರತ ತಂಡದ ನಾಯಕನ ಹೇಳಿಕೆಯಿಂದ ಉಂಟಾಗಿರುವ ಗೊಂದಲವನ್ನು ಸೂಕ್ತ ಉತ್ತರ ನೀಡಲು ಗಂಗೂಲಿ ಒಬ್ಬರೇ ಉತ್ತಮ ವ್ಯಕ್ತಿ " ಎಂದು ಸುನೀಲ್ ಗವಾಸ್ಕರ್ ಇಂಡಿಯಾ ಟುಡೇಗೆ ಹೇಳಿದ್ದಾರೆ.