ನವದೆಹಲಿ:ಏಕದಿನ ವಿಶ್ವಕಪ್‌ನಲ್ಲಿ ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್ ತಂಡಗಳು ಸೆಮಿಫೈನಲ್ ತಲುಪಲಿವೆ. ಇದರಲ್ಲಿ ಭಾರತ- ಪಾಕಿಸ್ತಾನದ ನಡುವಿನ ಸೆಮೀಸ್ ಸೆಣಸಾಟ ಕೋಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ನೋಡಲು ಬಯಸುವೆ!
ಇದು ಬಿಸಿಸಿಐ ಮಾಜಿ ಅಧ್ಯಕ್ಷ, ಭಾರತ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಅವರ ಅಭಿಪ್ರಾಯ. ಅಕ್ಟೋಬರ್ನಿಂದ ಆರಂಭವಾಗುವ ಏಕದಿನ ವಿಶ್ವಕಪ್ಗೆ ಅಗ್ರ ನಾಲ್ಕು ತಂಡಗಳನ್ನು ಅವರು ಆಯ್ಕೆ ಮಾಡಿದ್ದಾರೆ. ಇದಲ್ಲದೇ, ಐದನೇ ತಂಡವಾಗಿ ನ್ಯೂಜಿಲ್ಯಾಂಡ್ ಅನ್ನು ಕೂಡ ಅವರ ಹೆಸರಿಸಿದ್ದಾರೆ. ಕಿವೀಸ್ ತಂಡವನ್ನೂ ಕಡೆಗಣಿಸುವಂತಿಲ್ಲ ಎಂದು ಅವರು ಹೇಳಿದ್ದಾರೆ.
ಸೆಮಿಫೈನಲಿಸ್ಟ್ ತಂಡಗಳನ್ನು ಹೆಸರಿಸುವುದು ಕಷ್ಟ. ಭಾರತ ಹೊರತುಪಡಿಸಿ ಅಗ್ರ ನಾಲ್ಕು ತಂಡಗಳನ್ನು ಊಹಿಸುವುದಾದರೆ, ಅದರಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ಪಾಕಿಸ್ತಾನ ಇರಲಿವೆ. ಜೊತೆಗೆ ನ್ಯೂಜಿಲ್ಯಾಂಡ್ ಕೂಡ ಸ್ಥಾನ ಪಡೆದುಕೊಳ್ಳಬಹುದು. ಜೊತೆಗೆ ಭಾರತದ ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ನಲ್ಲಿ ಇಂಡಿಯಾ- ಪಾಕಿಸ್ತಾನದ ನಡುವಿನ ಸೆಮಿಫೈನಲ್ ನಡೆಯುವ ನಿರೀಕ್ಷೆ ಹೊಂದಿದ್ದೇನೆ ಎಂದು ತಿಳಿಸಿದ್ದಾರೆ.
ರೋಹಿತ್, ದ್ರಾವಿಡ್ ಮೇಲೆ ಒತ್ತಡ:ಐಸಿಸಿ ಪ್ರಶಸ್ತಿ ಗೆದ್ದು ಭಾರತ 10 ವರ್ಷ ಕಳೆದಿದೆ. ಈ ಬಾರಿ ದೇಶದಲ್ಲೇ ವಿಶ್ವಕಪ್ ನಡೆಯುತ್ತಿದೆ. ಹೀಗಾಗಿ ಮುಖ್ಯ ತರಬೇತುದಾರ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ ಅವರ ಮೇಲೆ ಹೆಚ್ಚು ಒತ್ತಡ ಇರುವುದು ಸಹಜ. ಮಾಜಿ ನಾಯಕ ಮಹೇಂದ್ರ ಸಿಂಗ್ ದೋನಿ ಅವರ ನಂತರ ಪ್ರಶಸ್ತಿ ಬರ ನೀಗಿಸಲು ಶ್ರಮ ವಹಿಸಲಿದ್ದಾರೆ ಎಂದೂ ಅಭಿಪ್ರಾಯಿಸಿದ್ದಾರೆ.
ಕಳೆದ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ 5 ಶತಕಗಳನ್ನು ಗಳಿಸಿದ್ದಾರೆ. ಅದೇ ನಿರೀಕ್ಷೆ ಈ ಬಾರಿಯೂ ಇದೆ. ಇದನ್ನು ಒತ್ತಡವಾಗಿ ತೆಗೆದುಕೊಳ್ಳಬಾರದು. ಕೋಚ್ ರಾಹುಲ್ ದ್ರಾವಿಡ್ ಅವರು ಆಟಗಾರನಾಗಿ ಮೈದಾನದಲ್ಲಿದ್ದಾಗಲೂ ಹಲವು ಬಾರಿ ಒತ್ತಡಕ್ಕೆ ಒಳಗಾಗಿದ್ದಾರೆ. ಈ ಬಾರಿ ಅವರು ಮುಖ್ಯ ಕೋಚ್ ಆಗಿರುವುದರಿಂದ ಪ್ರಶಸ್ತಿ ಗೆಲ್ಲಿಸಿಕೊಡುವ ಹೊಣೆ ಹೊತ್ತಿದ್ದಾರೆ. ಇಬ್ಬರೂ ಇದನ್ನು ನಿಭಾಯಿಸುವ ನಿರೀಕ್ಷೆ ಇದೆ ಎಂದರು.
ರೋಹಿತ್ ಶರ್ಮಾ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 5 ಬಾರಿ ಚಾಂಪಿಯನ್ ಮಾಡಿದ್ದಾರೆ. 2018 ರ ಏಷ್ಯಾ ಕಪ್ನಲ್ಲೂ ಭಾರತವನ್ನು ಮುನ್ನಡೆಸಿದ್ದಾರೆ. ಇದು ವಿಶ್ವಕಪ್‌ನಲ್ಲಿ ತಂಡವನ್ನು ಮುನ್ನಡೆಸಲು ನೆರವಾಗಬಹುದು. ದೇಶದ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಯನ್ನು ಇಬ್ಬರೂ ಅರ್ಥ ಮಾಡಿಕೊಂಡಿದ್ದಾರೆ ಎಂದು ಭಾವಿಸುತ್ತೇನೆ ಎಂದರು.
ವೆಸ್ಟ್ ಇಂಡೀಸ್ ನಿರ್ಗಮನ ಆಘಾತ:2 ಬಾರಿಯ ಚಾಂಪಿಯನ್ ಮತ್ತು ದೈತ್ಯ ಆಟಗಾರರನ್ನು ಹೊಂದಿರುವ ವೆಸ್ಟ್ ಇಂಡೀಸ್ ತಂಡ ವಿಶ್ವಕಪ್ ಅರ್ಹತಾ ಅಭಿಯಾನದಿಂದಲೇ ಹೊರಬಿದ್ದಿದ್ದು ಆಘಾತಕಾರಿಯಾಗಿದೆ. ಬರಿಯ ಚುಟುಕು ಕ್ರಿಕೆಟ್ಗೆ ಸೀಮಿತವಾಗದೇ ತಂಡ ಏಕದಿನ, ಟೆಸ್ಟ್ನಂತಹ ಕ್ರಿಕೆಟ್ಗೂ ಸಿದ್ಧವಾಗಬೇಕು. ಆಟಗಾರರು ಟಿ20 ಕ್ರಿಕೆಟ್ ಕಡೆ ಹೆಚ್ಚಿನ ಗಮನ ನೀಡಿದ್ದರಿಂದ ಅವರು ವಿಶ್ವಕಪ್ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.
ನೀಗುತ್ತಾ ಐಸಿಸಿ ಕಪ್ ಬರ?:ಭಾರತ ತಂಡ, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ದೇಶದಲ್ಲಿ 2011 ರಲ್ಲಿ ನಡೆದಿದ್ದ ಐಸಿಸಿ ಏಕದಿನ ವಿಶ್ವಕಪ್ ಗೆಲುವು ಸಾಧಿಸಿತ್ತು. ಮರುವರ್ಷ ಚಾಂಪಿಯನ್ ಟ್ರೋಫಿ ಗೆದ್ದಿತ್ತು. ಇದರ ನಂತರ 10 ವರ್ಷಗಳಿಂದ ಸತತವಾಗಿ ಐಸಿಸಿ ಟ್ರೋಫಿಗಳಲ್ಲಿ ವೈಫಲ್ಯ ಕಂಡಿದೆ. ಧೋನಿ, ವಿರಾಟ್ ಕೊಹ್ಲಿ, ರೋಹಿತ್ ನಾಯಕತ್ವದಲ್ಲೂ ಹಿನ್ನಡೆ ಅನುಭವಿಸಿದೆ. ಕಪ್ ಬರ ನೀಗಿಸಿಕೊಳ್ಳಲು ಮತ್ತೊಂದು ಅವಕಾಶ ಬಂದೊದಗಿದೆ. ತವರಿನಲ್ಲೇ ವಿಶ್ವಕಪ್ ಆಯೋಜನೆಯಾಗಿದ್ದರಿಂದ 2011 ಕರಾಮತ್ತು ಈ ಬಾರಿ ನಡೆಯುತ್ತಾ ಎಂಬುದು ಅಭಿಮಾನಿಗಳ ನಿರೀಕ್ಷೆಯಾಗಿದೆ.
ಇದನ್ನೂ ಓದಿ:ದುಲೀಪ್ ಟ್ರೋಫಿ: ದಕ್ಷಿಣ-ಪಶ್ಚಿಮ ವಲಯ ಫೈನಲ್ಗೆ, ಸತತ 2ನೇ ಬಾರಿಗೆ ಪ್ರಶಸ್ತಿಗೆ ಪೈಪೋಟಿ