ದುಬೈ:14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿನ ದ್ವಿತೀಯಾರ್ಧದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆರಂಭಿಕ ಬ್ಯಾಟರ್ ವೆಂಕಟೇಶ್ ಅಯ್ಯರ್ ಮಿಂಚು ಹರಿಸಿದ್ದು, ತಾವಾಡಿರುವ ಎರಡು ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ಮುಂಬೈ ವಿರುದ್ಧದ ಪಂದ್ಯ ಮುಕ್ತಾಯದ ಬಳಿಕ ಮಾತನಾಡಿರುವ ವೆಂಕಟೇಶ್ ಅಯ್ಯರ್, ಅನೇಕ ವಿಚಾರ ಬಹಿರಂಗಗೊಳಿಸಿದ್ದಾರೆ. ತಾವೊಬ್ಬ ಸೌರವ್ ಗಂಗೂಲಿ ಅವರ ಪಕ್ಕಾ ಅಭಿಮಾನಿ ಎಂದು ಹೇಳಿಕೊಂಡಿರುವ ಸ್ಫೋಟಕ ಬ್ಯಾಟ್ಸ್ಮನ್ ಅವರ ಶೈಲಿಯಲ್ಲಿ ಬ್ಯಾಟಿಂಗ್ ಮಾಡುವುದಾಗಿ ತಿಳಿಸಿದ್ದಾರೆ.
ಚಿಕ್ಕವನಾಗಿದ್ದ ಸಂದರ್ಭದಲ್ಲಿ ಬಲಗೈನಲ್ಲಿ ಬ್ಯಾಟಿಂಗ್ ಮಾಡ್ತಿದ್ದ ವೆಂಕಟೇಶ್ ತದನಂತರ ಗಂಗೂಲಿ ಅವರ ಶೈಲಿಯಲ್ಲಿ ಸಿಕ್ಸರ್ ಬಾರಿಸುವ ಉದ್ದೇಶದಿಂದ ಎಡಗೈ ಬ್ಯಾಟ್ಸ್ಮನ್ ಆಗಿ ಬದಲಾದರಂತೆ. ದಾದಾ ರೀತಿಯಲ್ಲೇ ಸಿಕ್ಸರ್ ಹೊಡೆಯಲು ನಾನು ಪ್ರಯತ್ನಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಸನ್ರೈಸರ್ಸ್ ಹೈದರಾಬಾದ್ ವೇಗಿ ನಟರಾಜನ್ಗೆ ಕೋವಿಡ್ : ಬದಲಿ ಆಟಗಾರನಿಗೆ ಮಣೆ
ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಂಡಿದ್ದ ಸಂದರ್ಭದಲ್ಲಿ ಸೌರವ್ ಗಂಗೂಲಿ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಕಣಕ್ಕಿಳಿದಿದ್ದರು. ಅದೇ ರೀತಿ ವೆಂಕಟೇಶ್ ಕೂಡ ಕೆಕೆಆರ್ ಪರ ಆಡಬೇಕು ಎಂಬ ಇರಾದೆ ಇಟ್ಟುಕೊಂಡಿದ್ದರಂತೆ. ಇದೀಗ ಆ ಅವಕಾಶ ನನಗೆ ಸಿಕ್ಕಿದೆ ಎಂದು ಹೇಳಿಕೊಂಡಿದ್ದಾರೆ. ದಾದಾ ಎಂದು ಹೆಸರು ಗಳಿಕೆ ಮಾಡಿರುವ ಸೌರವ್ ಗಂಗೂಲಿ ಅವರಿಗೆ ದೇಶಾದ್ಯಂತ ಲಕ್ಷಾಂತರ ಅಭಿಮಾನಿಗಳಿದ್ದು, ಅದರಲ್ಲಿ ನಾನೂ ಕೂಡ ಒಬ್ಬನಾಗಿದ್ದೇನೆಂದು ಹೇಳಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ 30 ಎಸೆತಗಳಲ್ಲಿ 53 ರನ್ಗಳಿಕೆ ಮಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಹಿಂದಿನ ಆರ್ಸಿಬಿ ವಿರುದ್ಧದ ಪಂದ್ಯದಲ್ಲೂ ಗಮನಾರ್ಹ ಪ್ರದರ್ಶನ ನೀಡಿದ್ದರು.
ವಿಶೇಷವೆಂದರೆ, ಸೈಯದ್ ಮುಸ್ತಾಕ್ ಅಲಿ ಟ್ರೋಫಿಯಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿದ್ದ ವೆಂಕಟೇಶ್ ಅಯ್ಯರ್, ತದನಂತರ ಆರಂಭಿಕನಾಗಿ ಭರ್ತಿ ಪಡೆದುಕೊಂಡು ಗಮನಾರ್ಹ ಪ್ರದರ್ಶನ ನೀಡಿದ್ದರು. ಅದರ ಫಲವಾಗಿ ಕೆಕೆಆರ್ ಅವರಿಗೆ ಮಣೆ ಹಾಕಿತ್ತು. ಮೊದಲಾರ್ಧದ ಪಂದ್ಯಗಳಲ್ಲಿ ಆಡುವ ಅವಕಾಶದಿಂದ ವಂಚಿತನಾಗಿದ್ದ ಅಯ್ಯರ್ ಇದೀಗ ಆರಂಭಿಕನಾಗಿ ಕಣಕ್ಕಿಳಿದಿದ್ದು, ತಮ್ಮ ಸಾಮರ್ಥ್ಯವನ್ನ ಆರಂಭದ ಎರಡು ಪಂದ್ಯಗಳಲ್ಲೇ ಹೊರಹಾಕಿದ್ದಾರೆ.