ಹ್ಯಾಮಿಲ್ಟನ್:ವೆಸ್ಟ್ ಇಂಡೀಸ್ ವಿರುದ್ಧ ಆಕರ್ಷಕ ಶತಕ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಭಾರತ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ತಮಗೆ ಸಿಕ್ಕಿರುವ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಇದೇ ಪಂದ್ಯದಲ್ಲಿ ಶತಕ ಸಿಡಿಸಿದ್ದ ಉಪನಾಯಕಿ ಹರ್ಮನ್ ಪ್ರೀತ್ ಕೌರ್ ಜೊತೆ ಹಂಚಿಕೊಂಡು ಹೃದಯ ವೈಶಾಲ್ಯತೆ ಮೆರೆದಿದ್ದಾರೆ.
ಮಿಥಾಲಿ ರಾಜ್ ಬಳಗ ನ್ಯೂಜಿಲ್ಯಾಂಡ್ ವಿರುದ್ಧ ಅಪಮಾನಕರ ಸೋಲಿನ ಬಳಿಕ ಇಂದು ನಡೆದ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ 155ರನ್ಗಳ ಬೃಹತ್ ಜಯ ಸಾಧಿಸಿ ಆತ್ಮ ವಿಶ್ವಾಸವನ್ನು ಮರಳಿ ಪಡೆದುಕೊಂಡಿದೆ. ಈ ಪಂದ್ಯದಲ್ಲಿ ಭಾರತ ತಂಡ 317 ರನ್ಗಳ ಬೃಹತ್ ಮೊತ್ತ ದಾಖಲಿಸಿತ್ತು. ಮಂಧಾನ 119 ಎಸೆತಗಳಲ್ಲಿ 13 ಬೌಂಡರಿ ಮತ್ತು 2 ಸಿಕ್ಸರ್ಗಳೊಂದಿಗೆ 123 ರನ್ಗಳಿಸಿದರೆ, ಹರ್ಮನ್ ಪ್ರೀತ್ ಕೌರ್ 107 ಎಸೆತಗಳಲ್ಲಿ 10 ಬೌಂಡರಿ ಮತ್ತು 2 ಸಿಕ್ಸರ್ನೊಂದಿಗೆ 109 ರನ್ಗಳಿಸಿದ್ದರು.
ಪಂದ್ಯದ ನಂತರ ಗರಿಷ್ಠ ರನ್ಗಳಿಸಿದ್ದಕ್ಕೆ ಮಂಧಾನ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಆಯ್ಕೆಯಾಗಿದ್ದರು, ಆದರೆ 25 ವರ್ಷದ ಆರಂಭಿಕ ಆಟಗಾರ್ತಿ, ಗೆಲುವಿನಲ್ಲಿ ಹರ್ಮನ್ ಪ್ರೀತ್ ಕೌರ್ ಪಾತ್ರವೂ ತಮ್ಮಷ್ಟೇ ಇದೇ ಎಂದು ಹೇಳಿ ಪ್ರಶಸ್ತಿಯನ್ನು ಕೌರ್ ಜೊತೆಗೆ ಹಂಚಿಕೊಂಡರು.
ನಾನೊಬ್ಬಳು ಕ್ರಿಕೆಟಿಗಳಾಗಿ ಶತಕ ಸಿಡಿಸಿದ ಬ್ಯಾಟರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಅರ್ಹರಾಗದೇ ಇರುವುದನ್ನು ನಾನು ಬಯಸುವುದಿಲ್ಲ. ತಂಡ 300 ರನ್ಗಳಿಸಲು ನಾವಿಬ್ಬರು ಸಮನಾದ ಕೊಡುಗೆ ನೀಡಿದ್ದೇವೆಂದು ನಾನು ಭಾವಿಸುತ್ತೇನೆ. ಆದ್ದರಿಂದ ಈ ಪ್ರಶಸ್ತಿಯನ್ನು ಪಡೆಯಲು ನಾವಿಬ್ಬರು ಸಮನಾದ ಸ್ಪರ್ಧಿಗಳಾಗಿದ್ದೇವೆ. ಹಾಗಾಗಿ ಇದನ್ನು ಹಂಚಿಕೊಳ್ಳುವುದು ಒಳ್ಳೆಯದು. ಐಸಿಸಿ ಮತ್ತೊಂದು ಟ್ರೋಫಿಯನ್ನು ನೀಡಲಿದೆ ಎಂದು ನನಗೆ ಖಾತ್ರಿಯಿದೆ. ಅದಕ್ಕಾಗಿ ಅವರ ಬಳಿ ಸಾಕಷ್ಟು ಬಜೆಟ್ ಇದೆ ಎಂದು ನನಗೆ ಖಾತ್ರಿಯಿದೆ ಎಂದು ಮಂಧಾನ ಪಂದ್ಯದ ನಂತರ ತಿಳಿಸಿದರು.
ಇದನ್ನೂ ಓದಿ:ಆರ್ಸಿಬಿಗೆ ನೂತನ ಸಾರಥಿ.. ಫಾಫ್ ಡು ಪ್ಲೆಸಿಸ್ರನ್ನು ನಾಯಕನಾಗಿ ಘೋಷಿಸಿದ ರಾಯಲ್ ಚಾಲೆಂಜರ್ಸ್