ಮುಂಬೈ:ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಬೆಂಗಳೂರು ತಂಡವಾದ ರಾಯಲ್ ಚಾಲೆಂಜರ್ಸ್ಗೆ ಅದೃಷ್ಟವೇ ಸರಿ ಇಲ್ಲವೇನೋ?. ಎಂತಹ ಘಟಾನುಘಟಿ ಆಟಗಾರರಿದ್ದರೂ ಟ್ರೋಫಿ ಗೆಲ್ಲುವುದಿರಲಿ ಉತ್ತಮ ಪ್ರದರ್ಶನ ಕೂಡ ಮೂಡಿಬಂದಿಲ್ಲ. ಅದು ಈಗ ಮಹಿಳಾ ಪ್ರೀಮಿಯರ್ ಲೀಗ್ನಲ್ಲೂ ಗೋಚರವಾಗುತ್ತಿದೆ. ಲೀಗ್ನಲ್ಲಿ ಆಡಿದ 4 ಪಂದ್ಯಗಳು ಗೋತಾ ಆಗಿದ್ದು, ಅಭಿಮಾನಿಗಳಿಗೆ ಭಾರಿ ನಿರಾಸೆ ಉಂಟಾಗಿದೆ. ಇದರಿಂದ ತಂಡದ ನಾಯಕಿ, ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ಟ್ರೋಲ್ಗೆ ತುತ್ತಾಗಿದ್ದಾರೆ.
ಮಹಿಳಾ ಪ್ರೀಮಿಯರ್ ಲೀಗ್ (WPL)ನ ಮೊದಲ ಆವೃತ್ತಿಯಲ್ಲಿ ಹೀನಾಯ ಪ್ರದರ್ಶನ ಕಾಣುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿದ 4 ಪಂದ್ಯಗಳಲ್ಲೂ ಸೋತಿದೆ. ಇದರಿಂದ ಸ್ಮೃತಿ ಮಂಧಾನ ನೇತೃತ್ವದ ತಂಡ ಛೀಮಾರಿ ಹಾಕಿಸಿಕೊಳ್ಳುತ್ತಿದೆ. ಅದರಲ್ಲೂ ಶುಕ್ರವಾರ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಯುಪಿ ವಾರಿಯರ್ಸ್ ಎದುರಿನ ಪಂದ್ಯದಲ್ಲಿ 10 ವಿಕೆಟ್ ಸೋಲು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಟೀಕೆಗಳ ಸುರಿಮಳೆ:ಟೂರ್ನಿಯಲ್ಲಿತೀವ್ರಹಿನ್ನಡೆ ಅನುಭವಿಸುತ್ತಿರುವ ಬೆಂಗಳೂರು ತಂಡದ ನಾಯಕಿ ಮಂಧಾನ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಗುರಿಯಾಗಿ, ಟ್ರೋಲ್ ಆಗಿದ್ದಾರೆ. ಮಂಧಾನ ಅವರ ಬ್ಯಾಟಿಂಗ್ ಮತ್ತು ನಾಯಕತ್ವದ ಕೌಶಲ್ಯವನ್ನು ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಡಬ್ಲ್ಯೂಪಿಎಲ್ನಲ್ಲಿ ಅತಿ ದುಬಾರಿ ಆಟಗಾರ್ತಿಯಾಗಿ ಬಿಕರಿಯಾಗಿರುವ ಮಂಧಾನಗೆ ನೀಡಿದ ಹಣ ಸಂಪೂರ್ಣ ವ್ಯರ್ಥವಾಯಿತು. ಅವರು ಬ್ಯಾಟಿಂಗ್ನಲ್ಲೂ ಫೇಲ್ ಆಗಿದ್ದಲ್ಲದೇ, ನಾಯಕತ್ವದಲ್ಲೂ ಮುಗ್ಗರಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
"ಸ್ಮೃತಿ ಮಂಧಾನ ತುಂಬಾ ಕೆಟ್ಟ ನಾಯಕಿ. ನಿರ್ಧಾರಗಳು ಕಳಪೆಯಾಗಿವೆ. ಅವರಿಗೆ ನೀಡಿದ 3.4 ಕೋಟಿ ರೂಪಾಯಿ ಹಣ ವ್ಯರ್ಥವಾಯಿತು" ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ಮಾಡಲಾಗಿದೆ. ಉತ್ತರಪ್ರದೇಶ ವಿರುದ್ಧದ ಪಂದ್ಯವನ್ನು ಗುರಿಯಾಗಿಸಿಕೊಂಡು ನೆಟ್ಟಿಗರೊಬ್ಬರು ಟೀಕಿಸಿದ್ದು, "ಮಧ್ಯಮ ಕ್ರಮಾಂಕದಲ್ಲಿ ಹೀದರ್ ನೈಟ್ ಮತ್ತು ಎರಿನ್ ಬರ್ನ್ಸ್ ಇರುವಾಗ ಕನಿಕಾ ಅಹುಜಾ ಅವರನ್ನು ಕಳುಹಿಸುವ ಅಗತ್ಯವಿರಲಿಲ್ಲ. ಹೀಗಾಗಿ ಸ್ಮೃತಿ ತುಂಬಾ ಕಳಪೆ ನಾಯಕಿ" ಎಂದು ಟೀಕಿಸಿದ್ದಾರೆ.
"ಸ್ಮೃತಿ ಮಂಧಾನಗೆ ನೀಡಿದ 3 ಕೋಟಿ ರೂ ಸಂಪೂರ್ಣವಾಗಿ ವ್ಯರ್ಥವಾಯಿತು ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದರೆ, “ಕ್ಯಾಪ್ಟನ್ಸಿ ಪ್ರತಿಯೊಬ್ಬರ ಸ್ವತ್ತಲ್ಲ. ಇದನ್ನು ಅರಿತಿರಬೇಕು. ಮಹಿಳಾ ಪಂದ್ಯಾವಳಿಯಲ್ಲಿ ದೊಡ್ಡ ತಂಡವನ್ನು ಮುನ್ನಡೆಸುವುದು ಅಷ್ಟು ಸುಲಭವಲ್ಲ. ನಾಲ್ಕು ಸೋಲುಗಳೇ ಇದಕ್ಕೆ ಸಾಕ್ಷಿ. ಸ್ಮೃತಿ ಮಂಧಾನ ಅವರ ಕಳಪೆ ನಾಯಕತ್ವ ಮತ್ತು ಅವರ ನೀರಸ ಬ್ಯಾಟಿಂಗ್ ಪ್ರದರ್ಶನದಿಂದ ಸ್ಪಷ್ಟವಾಗಿ ತಿಳಿಯುತ್ತದೆ” ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಇದರೊಂದಿಗೆ ಮುಂಬೈ ಮೂಲದ ಕ್ರಿಕೆಟ್ ಆಟಗಾರ್ತಿಗೆ ಅಭಿಮಾನಿಗಳ ಇನ್ನೊಂದು ವರ್ಗ ಬೆಂಬಲಕ್ಕೆ ನಿಂತಿದೆ. ಕ್ರಿಕೆಟ್ನಲ್ಲಿ ಸೋಲು ಗೆಲುವು ಸಹಜ. ಒಬ್ಬ ಆಟಗಾರ್ತಿಯಿಂದ ಏನನ್ನೂ ಮಾಡಲಾಗದು. ಸ್ಮೃತಿ ಮಂಧಾನ ರಾಷ್ಟ್ರೀಯ ತಂಡಕ್ಕೆ ಅದ್ಭುತ ಕೊಡುಗೆ ನೀಡಿದ್ದಾರೆ. ಲೀಗ್ನಲ್ಲಿ ವೈಫಲ್ಯ ಕಂಡಿದ್ದರ ಮೇಲೆ ಅವರ ಆಟವನ್ನು ಅಳೆಯಬಾರದು ಎಂದು ಸಪೋರ್ಟ್ ಮಾಡಿದ್ದಾರೆ.
ದುಬಾರಿ ಬಿಡ್ಗೆ ಬಿಕರಿಯಾಗಿದ್ದ ಸ್ಮೃತಿ:WPL ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ 3.4 ಕೋಟಿ ರೂಪಾಯಿ ನೀಡಿ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನರನ್ನು ಅತ್ಯಂತ ದುಬಾರಿ ಬೆಲೆಗೆ ಖರೀದಿ ಮಾಡಿದೆ. ಬಿಡ್ಡಿಂಗ್ ವೇಳೆ ಸ್ಮೃತಿ ಮಂಧಾನರನ್ನು ಖರೀದಿ ಮಾಡಲು ಎಲ್ಲ ಫ್ರಾಂಚೈಸಿಗಳು ಸ್ಪರ್ಧೆ ಮಾಡಿದ್ದವು. ಮುಂಬೈ ಮತ್ತು ಬೆಂಗಳೂರು ತಂಡದ ಮಧ್ಯೆ ಪೈಪೋಟಿ ನಡೆದು, ಕೊನೆಯಲ್ಲಿ ಆರ್ಸಿಬಿ ದುಬಾರಿ ಬೆಲೆಗೆ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಆಟಗಾರ್ತಿಯ ಮೇಲಿರುವ ವಿಪರೀತ ನಿರೀಕ್ಷೆ ಹುಸಿಯಾಗಿದೆ.
ಆಟಗಾರ್ತಿಯಾಗಿಯೂ ಮಂಧಾನ ವೈಫಲ್ಯ ಕಂಡಿದ್ದಾರೆ. ಆಡಿದ ನಾಲ್ಕು ಪಂದ್ಯಗಳಲ್ಲಿ 35, 23, 18, 4 ಸೇರಿ ಈವರೆಗೂ 80 ರನ್ ಮಾತ್ರ ಗಳಿಸಿದ್ದಾರೆ. ತಂಡದ ಸಂಯೋಜನೆ ಮತ್ತು ಆಡುವ ಹನ್ನೊಂದರ ಬಳಗವನ್ನು ಕಣಕ್ಕಿಳಿಸುವಲ್ಲಿಯೂ ಎಡವುತ್ತಿರುವುದು ಗೆಲುವು ಪಡೆಯಲು ದುಬಾರಿಯಾಗುತ್ತಿದೆ. ಬೆಂಗಳೂರು ತಂಡ ಪ್ರಸ್ತುತ WPL 2023 ಪಾಯಿಂಟ್ಸ್ ಟೇಬಲ್‌ನಲ್ಲಿ ಕೊನೆಯ ಸ್ಥಾನದಲ್ಲಿದೆ. ತಂಡ ತನ್ನ ಮುಂದಿನ ಪಂದ್ಯದಲ್ಲಿ ಮಾರ್ಚ್ 13 ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಎದುರಿಸಲಿದೆ.
ಇದನ್ನೂ ಓದಿ:ಮಹಿಳಾ ಐಪಿಎಲ್: ಕಾಪ್, ಶೆಫಾಲಿ ಅಬ್ಬರಕ್ಕೆ ನಲುಗಿದ ಗುಜರಾತ್; ಡೆಲ್ಲಿಗೆ 10 ವಿಕೆಟ್ ಗೆಲುವು!