ಶಾರ್ಜಾ: ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಆಗಿರುವ ಸ್ಟೀವ್ ಸ್ಮಿತ್ರನ್ನು ನಾನು ಇಷ್ಟಪಡುತ್ತೇನೆ. ಆದರೆ ನನ್ನ ಪ್ರಕಾರ ಆತ ಟಿ20 ತಂಡದಲ್ಲಿರಬಾರದು ಎಂದು ಮಾಜಿ ಆಸೀಸ್ ದಿಗ್ಗಜ ಶೇನ್ ವಾರ್ನ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಶನಿವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಕೇವಲ 125ಕ್ಕೆ ಆಲೌಟ್ ಆಗಿತ್ತು. ಈ ಸರಳ ಗುರಿಯನ್ನು ಇಂಗ್ಲೆಂಡ್ ಕೇವಲ 2 ವಿಕೆಟ್ ಕಳೆದುಕೊಂಡು 11.4 ಓವರ್ಗಳಲ್ಲಿ ಗುರಿ ತಲುಪಿತು. ಬಟ್ಲರ್ ಕೇವಲ 32ಎಸೆತಗಳಲ್ಲಿ 5 ಬೌಂಡರಿ 5 ಸಿಕ್ಸರ್ ಸಹಿತ ಅಜೇಯ 71 ರನ್ ಗಳಿಸಿ ತಂಡವನ್ನು ಗೆಲುವಿನ ಗಡಿದಾಟಿಸಿದ್ದರು.
ಈ ಪಂದ್ಯದಲ್ಲಿಆಸ್ಟ್ರೇಲಿಯಾ ತಂಡದ ಆಯ್ಕೆಯ ಬಗ್ಗೆ ಮಾಜಿ ಸ್ಪಿನ್ನರ್ ಶೇನ್ ವಾರ್ನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರತಿಭಾನ್ವಿತ ಬ್ಯಾಟರ್ ಆಗಿರುವ ಸ್ಟೀವ್ ಸ್ಮಿತ್ ಅವರು ಟಿ20 ತಂಡದಲ್ಲಿರಬಾರದು ಎಂದು ಟ್ವೀಟ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.
"ಮಿಚೆಲ್ ಮಾರ್ಷ್ರನ್ನು ತಂಡದಿಂದ ಕೈಬಿಟ್ಟ ಆಸ್ಟ್ರೇಲಿಯಾ ತಂಡದ ಆಯ್ಕೆಯ ಬಗ್ಗೆ ನನಗೆ ಬೇಸರವಿದೆ. ಮತ್ತು ಗ್ಲೇನ್ ಮ್ಯಾಕ್ಸ್ವೆಲ್ ಅವರನ್ನು ಪವರ್ ಪ್ಲೇನಲ್ಲಿ ಕಳುಹಿಸಿಬಾರದಿತ್ತು. ಅವರೂ ಯಾವಾಗಲೂ ಪವರ್ ಪ್ಲೇ ಮುಗಿದ ಬಳಿಕ ಬರಬೇಕು. ಸ್ಟೋಯ್ನಿಸ್ ಪವರ್ ಪ್ಲೇನಲ್ಲಿ ಆಡಬೇಕು. ಆಸೀಸ್ ಕಳಪೆ ಯೋಜನೆ ಮತ್ತು ತಂತ್ರಗಾರಿಕೆಯನ್ನು ಪ್ರದರ್ಶಿಸಿದೆ. ನಾನು ಸ್ಟೀವ್ ಸ್ಮಿತ್ರನ್ನು ಇಷ್ಟಪಡುತ್ತೇನೆ, ಆದರೆ ಅವರು ಟಿ20 ತಂಡದಲ್ಲಿ ಇರಬಾರದು. ಅವರ ಜಾಗದಲ್ಲಿ ಮಾರ್ಷ್ ಇರಬೇಕು ಎಂದು ಆಸ್ಟ್ರೇಲಿಯಾ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲು ಕಾಣುತ್ತಿದ್ದಂತೆ ಟ್ವೀಟ್ ಮೂಲಕ ಆಸಮಾಧಾನ ಹೊರ ಹಾಕಿದ್ದಾರೆ.
ಮಿಚೆಲ್ ಮಾರ್ಷ್ ಇತ್ತೀಚೆಗೆ ಮುಗಿದ ಬಾಂಗ್ಲಾದೇಶ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ 3ನೇ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು.
ಇದನ್ನು ಓದಿ:ವಿಶ್ವಕಪ್ ಮಧ್ಯದಲ್ಲೇ ಕ್ರಿಕೆಟ್ಗೆ ವಿದಾಯ ಘೋಷಿಸಿದ ಅಸ್ಗರ್... ಇಂದಿನ ಪಂದ್ಯವೇ ಕೊನೆ!