ಚಿತ್ತಗಾಂಗ್:ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ವೇಳೆ ಭಾರತದ ವೇಗಿ ಮೊಹಮ್ಮದ್ ಸಿರಾಜ್ ಹಾಗೂ ಬಾಂಗ್ಲಾದೇಶದ ಬ್ಯಾಟರ್ ಲಿಟ್ಟನ್ ದಾಸ್ ನಡುವೆ ಮಾತಿನ ಚಕಮಕಿ ನಡೆಯಿತು. ಘಟನೆ ಬಗ್ಗೆ ಮೌನ ಮುರಿದಿರುವ ಸಿರಾಜ್, ತಾವು ಆಕ್ರಮಣಕಾರಿ ಬ್ಯಾಟರ್‌ಗೆ ಎಚ್ಚರಿಕೆಯಿಂದ ಆಡುವಂತೆ ಸಲಹೆ ನೀಡಿರುವುದಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಮೈದಾನದಲ್ಲಿ ಜಗಳವಾಡಿದ ಮರುಎಸೆತದಲ್ಲೇ ಲಿಟ್ಟನ್ ದಾಸ್ ಬೌಲ್ಡ್ ಆಗುವ ಮೂಲಕ ಪೆವಿಲಿಯನ್ ಸೇರಿದ್ದರು. ವಿಕೆಟ್ ಕಬಳಿಸಿದ ಸಿರಾಜ್, ವಿತರಾಟ್ ಕೊಹ್ಲಿ ಹಾಗೂ ತಂಡದ ಆಟಗಾರರು ಸಂಭ್ರಮಿಸಿದ್ದರು. ಬಾಂಗ್ಲಾದೇಶದ ಇನಿಂಗ್ಸ್‌ನ 14ನೇ ಓವರ್‌ನಲ್ಲಿ ಇದೆಲ್ಲ ನಡೆದಿತ್ತು.
ಸಿರಾಜ್ ಓವರ್‌ನ ಮೊದಲ ಎಸೆತವನ್ನು ಲಿಟ್ಟನ್ ದಾಸ್ ರಕ್ಷಣಾತ್ಮಕವಾಗಿ ಆಡಿದರು. ಆಗ ಸಿರಾಜ್ ತಮ್ಮ ಫಾಲೋ ಥ್ರೂನಲ್ಲಿ, ಲಿಟ್ಟನ್ರತ್ತ ನೋಡುತ್ತ ಏನೋ ಹೇಳಿದರು. ಇದಕ್ಕೆ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಸಾಥ್ ನೀಡಿದಂತಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಲಿಟ್ಟನ್ ಕೂಡ ಕೈಯನ್ನು ಕಿವಿಗಳತ್ತ ಇಟ್ಟು ಸನ್ನೆ ಮೂಲಕ 'ನೀನು ಏನು ಹೇಳಿದೆ?' ಎನ್ನುತ್ತ ಸಿರಾಜ್ರತ್ತ ಬಂದರು.