ದುಬೈ:ವೆಸ್ಟ್ ಇಂಡೀಸ್, ಜಿಂಬಾಬ್ವೆ ವಿರುದ್ಧದ ಕ್ರಿಕೆಟ್ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಟೀಂ ಇಂಡಿಯಾ ಯುವ ಆಟಗಾರ ಶುಭಮನ್ ಗಿಲ್ ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ 45 ಸ್ಥಾನ ಮೇಲಕ್ಕೇರಿದ್ದಾರೆ. ಈ ಮೂಲಕ ಅವರಿಗೆ ರ್ಯಾಂಕಿಂಗ್ನಲ್ಲಿ 38ನೇ ಸ್ಥಾನ ದೊರೆತಿದೆ. ವಿಂಡೀಸ್, ಜಿಂಬಾಬ್ವೆ ವಿರುದ್ಧದ ಸರಣಿಗಿಂತಲೂ ಮೊದಲು ಇವರು 93ನೇ ಸ್ಥಾನದಲ್ಲಿದ್ದರು.
ಜಿಂಬಾಬ್ವೆ ಪ್ರವಾಸದಲ್ಲಿ ಅದ್ಭುತ ಪ್ರದರ್ಶನ: ODI ಶ್ರೇಯಾಂಕದಲ್ಲಿ 45 ಸ್ಥಾನ ಜಿಗಿತ ಕಂಡ ಗಿಲ್ - Etv bharat kannada
ಅಮೋಘ ಫಾರ್ಮ್ನಲ್ಲಿರುವ ಟೀಂ ಇಂಡಿಯಾ ಬ್ಯಾಟರ್ ಶುಭಮನ್ ಗಿಲ್ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಏರಿಕೆ ಕಂಡಿದ್ದಾರೆ.

ವೆಸ್ಟ್ ಇಂಡೀಸ್ ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ತೋರಿದ ಶುಭಮನ್ ಗಿಲ್, ಜಿಂಬಾಬ್ವೆ ವಿರುದ್ಧ ಶತಕ ಸೇರಿದಂತೆ 245 ರನ್ಗಳಿಸಿದ್ದರು. ಜಿಂಬಾಬ್ವೆ ವಿರುದ್ಧದ ಮೊದಲ ಪಂದ್ಯದಲ್ಲಿ 82 ರನ್ಗಳಿಸಿದ್ದ ಇವರು ಕೊನೆಯ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದರು.
ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಶಿಖರ್ ಧವನ್ಗೆ ಅದೃಷ್ಟ ಕೈಕೊಟ್ಟಿದ್ದು, ಒಂದು ಸ್ಥಾನ ಕಳೆದುಕೊಂಡಿದ್ದಾರೆ. ಉಳಿದಂತೆ, ಪಾಕಿಸ್ತಾನ ತಂಡದ ಕ್ಯಾಪ್ಟನ್ ಬಾಬರ್ ಆಜಂ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಇನ್ನುಳಿದಂತೆ, ದಕ್ಷಿಣ ಆಫ್ರಿಕಾದ ಡಸ್ಸೆನ್ 2ನೇ ಸ್ಥಾನದಲ್ಲಿದ್ದು, ಕ್ವಿಂಟನ್ ಡಿಕಾಕ್ 3, ಇಮಾಮ್ ಉಲ್ ಹಕ್ 4 ಹಾಗೂ 5ನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಇದ್ದಾರೆ.
ಕುಸಿದ ಬುಮ್ರಾ: ಬೌಲಿಂಗ್ ವಿಭಾಗದಲ್ಲಿ ನ್ಯೂಜಿಲ್ಯಾಂಡ್ ಟ್ರೆಂಟ್ ಬೌಲ್ಟ್ ಮೊದಲ ಸ್ಥಾನದಲ್ಲಿದ್ದು, ಜೋಶ್ ಹ್ಯಾಜಲ್ವುಡ್ ಎರಡನೇ ಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ. ಮೂರನೇ ಸ್ಥಾನದಲ್ಲಿ ಅಫ್ಘಾನಿಸ್ತಾನದ ಮುಜೀಬ್ ಉರ್ ರೆಹಮಾನ್ ಇದ್ದಾರೆ. ಎರಡನೇ ಸ್ಥಾನದಲ್ಲಿದ್ದ ಬುಮ್ರಾ ಕೆಲ ಸರಣಿಗಳಿಂದ ಹೊರಗುಳಿದಿರುವ ಕಾರಣಕ್ಕೆ 4ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.