ಕರ್ನಾಟಕ

karnataka

ETV Bharat / sports

ICC ODI Rankings: ಪಾಕಿಸ್ತಾನದ ವಿರುದ್ಧ ಭಾರತದ ಅದ್ಭುತ ಆಟ.. 4 ವರ್ಷಗಳ ನಂತರ ತ್ರಿವಳಿ ಬ್ಯಾಟರ್​ಗಳ ದಾಖಲೆ

ಏಷ್ಯಾಕಪ್​ನಲ್ಲಿ ಉತ್ತಮ ಆಟ ಪ್ರದರ್ಶಿಸುತ್ತಿರುವ ಭಾರತ ತಂಡ ಐಸಿಸಿ ನೀಡುವ ಶ್ರೇಯಾಂಕದಲ್ಲಿ ಗಮನಾರ್ಹ ಏರಿಕೆ ಕಂಡಿದೆ.

Shubman Gill rises to career best ICC Mens ODI Rankings,
Shubman Gill rises to career best ICC Mens ODI Rankings,

By ETV Bharat Karnataka Team

Published : Sep 13, 2023, 4:01 PM IST

ದುಬೈ: ಏಷ್ಯಾಕಪ್​ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿ ಸತತ ಗೆಲುವುಗಳನ್ನು ದಾಖಲಿಸಿ ಫೈನಲ್​ ಪ್ರವೇಶಿಸಿದೆ. ತಂಡದಲ್ಲಿ ಅದ್ಭುತ ಪ್ರದರ್ಶನ ನೀಡಿದ ಆಟಗಾರರ ಶ್ರೇಯಾಂಕದಲ್ಲಿ ಏರಿಕೆ ಕಂಡಿದ್ದಾರೆ. ಭಾರತದ ಭರವಸೆಯ ಯುವ ಬ್ಯಾಟರ್​ ಶುಭಮನ್​ ಗಿಲ್​ ತಮ್ಮ ವೃತ್ತಿ ಜೀವನದ ಉತ್ತಮ ಶ್ರೇಯಾಂಕಕ್ಕೆ ಏರಿದ್ದಾರೆ. ಅವಲ್ಲದೇ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ, ಕುಲದೀಪ್​ ಯಾದವ್​ ಸಹ ತಮ್ಮ ಸ್ಥಾನದಲ್ಲಿ ಏರಿಕೆ ಕಂಡಿದ್ದಾರೆ.

ವಿರಾಟ್​ರನ್ನು ಕಿಂಗ್​​ ಕೊಹ್ಲಿ ಎಂದು ಕರೆದರೆ ಶುಭಮನ್​ ಗಿಲ್​ಗೆ ಪ್ರಿನ್ಸ್​ ಎಂದೇ ಕರೆಯಲಾಗುತ್ತದೆ. ಭಾರತ ತಂಡದ ಫ್ಯೂಚರ್​ ಸ್ಟಾರ್​ ಬ್ಯಾಟರ್​ ಎಂದು ಗಿಲ್​ ಕರೆಸಿಕೊಳ್ಳುತ್ತಿದ್ದಾರೆ. ಅಲ್ಲದೇ ಅದಕ್ಕೆ ತಕ್ಕಂತೆ ತಮ್ಮ ಬ್ಯಾಟಿಂಗ್​ ಪ್ರದರ್ಶನವನ್ನೂ ತೋರುತ್ತಿದ್ದಾರೆ. ಏಷ್ಯಾಕಪ್​ನ ಮೊದಲ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವೈಫಲ್ಯಕಂಡ ಗಿಲ್​ ನೇಪಾಳದ ವಿರುದ್ಧ ಉತ್ತಮ ಕಮ್​ಬ್ಯಾಕ್​ ಮಾಡಿದರು.

ನಂತರ ಮತ್ತೆ ಪಾಕಿಸ್ತಾನದ ಮೇಲೆ ನಡೆದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕದ ಇನ್ನಿಂಗ್ಸ್​​ ಕಟ್ಟಿದ್ದರು. ಇವರ ಈ ಇನ್ನಿಂಗ್ಸ್​ಗಳ ಲೆಕ್ಕಾಚಾರದಿಂದ ಐಸಿಸಿ ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೆ ಏರಿದ್ದಾರೆ. ಪಾಕಿಸ್ತಾನ ತಂಡದ ನಾಯಕ ಬಾಬರ್​ ಅಜಮ್​ ತಮ್ಮ ಅಗ್ರಸ್ಥಾನವನ್ನು ಏಕದಿನ ಶ್ರೇಯಾಂಕದಲ್ಲಿ ಮುಂದುವರೆಸಿದ್ದಾರೆ. ಈಗ ಗಿಲ್​ ಅವರಿಂದ 104 ರೇಟಿಂಗ್​ ಅಂಕದಿಂದ ಹಿಂದಿದ್ದಾರೆ ಅಷ್ಟೆ. ಏಷ್ಯಾಕಪ್​, ಆಸ್ಟ್ರೇಲಿಯಾ ಸರಣಿ ಮತ್ತು ಏಕದಿನ ವಿಶ್ವಕಪ್​ನಲ್ಲಿ ಭರ್ಜರಿ ಪ್ರದರ್ಶನ ನೀಡಿದಲ್ಲಿ ಬಾಬರ್​ ಅವರನ್ನು ಹಿಂದಿಕ್ಕಲಿದ್ದಾರೆ. ನಡೆಯುತ್ತಿರುವ ಏಷ್ಯಾ ಕಪ್‌ನಲ್ಲಿ ಗಿಲ್​ ಎರಡು ಅರ್ಧಶತಕದ ನೆರವಿನಿಂದ 154 ರನ್ ಗಳಿಸಿದ್ದಾರೆ.

ನಾಲ್ಕು ವರ್ಷದ ನಂತರ ಟಾಪ್​ 10ನಲ್ಲಿ ತ್ರಿವಳಿ ಭಾರತೀಯರು: ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಲಾ ಎರಡು ಸ್ಥಾನಗಳ ಏರಿಕೆ ಕಂಡಿದ್ದು, ಕ್ರಮವಾಗಿ ಎಂಟು ಮತ್ತು ಒಂಬತ್ತನೇ ರ್‍ಯಾಂಕಿಂಗ್ ಹೊಂದಿದ್ದಾರೆ. ನೇಪಾಳ, ಪಾಕಿಸ್ತಾನದ ಮತ್ತು ಶ್ರೀಲಂಕಾದ ವಿರುದ್ಧ ಅರ್ಧಶತಕಗಳನ್ನು ರೋಹಿತ್​ ಶರ್ಮಾ ಏಷ್ಯಾಕಪ್​ನಲ್ಲಿ ಗಳಿಸಿ ಫಾರ್ಮ್​ ತೋರಿದ್ದಾರೆ. ವಿರಾಟ್​ ಕೊಹ್ಲಿ ಪಾಕಿಸ್ತಾನದ ವಿರುದ್ಧ ಭರ್ಜರಿ ಶತಕ ಸಿಡಿಸಿದ್ದಾರೆ. ಇದು ಶ್ರೇಯಾಂಕದ ಏರಿಕೆಗೆ ಕಾರಣವಾಗಿದೆ.

ಇದರಿಂದ 2019ರ ನಂತರ ಐಸಿಸಿ ಶ್ರೇಯಾಂಕದ ಟಾಪ್​ 10ರ ಒಳಗೆ ಭಾರತದ 3 ಬ್ಯಾಟಿರ್​ಗಳು ಸ್ಥಾನ ಪಡೆದಂತಾಗಿದೆ. ಶರ್ಮಾ, ಕೊಹ್ಲಿ ಮತ್ತು ಅನುಭವಿ ಎಡಗೈ ಓಪನರ್ ಶಿಖರ್ ಧವನ್ ನಾಲ್ಕು ವರ್ಷಗಳ ಹಿಂದೆ ಐಸಿಸಿ ಅಗ್ರ 10 ರಲ್ಲಿ ಸ್ಥಾನ ಪಡೆದಿದ್ದ ಮೂವರು ಬ್ಯಾಟರ್‌ಗಳಾಗಿದ್ದರು. ಸೆಪ್ಟೆಂಬರ್ 2018 ರಲ್ಲಿ ಮೂವರು ಬ್ಯಾಟರ್​ಗಳು ಟೇಬಲ್‌ನ ಟಾಪ್​ ಸಿಕ್ಸ್​ ಸ್ಥಾನಗಳಲ್ಲಿದ್ದರು.

ಗಾಯದಿಂದ ಚೇತರಿಸಿಕೊಂಡು ಪಾಕಿಸ್ತಾದ ವಿರುದ್ಧ ಶತಕ ಗಳಿಸಿ ಕಮ್​ಬ್ಯಾಕ್​ ಮಾಡಿದ ಕನ್ನಡಿಗ ಕೆಎಲ್​ ರಾಹುಲ್ 10 ಸ್ಥಾನಗಳ ಏರಿಕೆ ಕಂಡು 37ನೇ ರ್‍ಯಾಂಕಿಂಗ್​ನಲ್ಲಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟರ್​ ಇಶಾನ್ ಕಿಶನ್ ಎರಡು ಸ್ಥಾನ ಮೇಲೇರಿ 22ನೇ ಶ್ರೇಯಾಂಕದಲ್ಲಿದ್ದಾರೆ. ಏಷ್ಯಾಕಪ್​ನ ಎರಡು ಪಂದ್ಯಗಳಿಂದ ಒಂಬತ್ತು ವಿಕೆಟ್ ಪಡೆದ ಎಡಗೈ ಮಣಿಕಟ್ಟಿನ ಸ್ಪಿನ್ನರ್ ಕುಲದೀಪ್ ಯಾದವ್ ಐದು ಸ್ಥಾನ ಮೇಲೇರಿ ಏಳನೇ ಸ್ಥಾನಕ್ಕೆ ತಲುಪಿದ್ದಾರೆ.

ಟಾಪ್​ ಐದು ಸ್ಥಾನದಲ್ಲಿ ಮೂವರು ಪಾಕಿಸ್ತಾನದ ಬ್ಯಾಟರ್​ಗಳು ಸ್ಥಾನ ಪಡೆದಿದ್ದರು. ಈಗ ಏಷ್ಯಾಕಪ್​ನಲ್ಲಿ ಫ್ಲಾಫ್​ ಶೋ ಕೊಡುತ್ತಿರುವ ಫಾಕರ್​ ಜಮಾನ್​ ಮತ್ತು ಇಫ್ತಿಕರ್ ಅಹಮ್ಮದ್​ ಕುಸಿತ ಕಂಡಿದ್ದಾರೆ. ಜಮಾನ್​ 10ನೇ ಮತ್ತು ಉಲ್​ ಹಕ್​ 5ನೇ ಶ್ರೇಯಾಂಕಕ್ಕೆ ಇಳಿದಿದ್ದಾರೆ. ದಕ್ಷಿಣ ಆಫ್ರಿಕಾ ನಾಯಕ ತೆಂಬಾ ಬವುಮಾ ಅವರು ತಮ್ಮ ಕೊನೆಯ ಎಂಟು ಏಕದಿನಗಳಲ್ಲಿ ಮೂರು ಶತಕಗಳು ಮತ್ತು ಎರಡು ಅರ್ಧಶತಕದ ಪರಿಣಾಮ 11ನೇ ಸ್ಥಾನಕ್ಕೆ ಪ್ರವೇಶಿಸಿದ್ದಾರೆ. ಈ ಹಿಂದೆ 25ನೇ ಸ್ಥಾನದಲ್ಲಿದ್ದರೆ 21 ಸ್ಥಾನ ಮೇಲೇರಿ 11ನೇ ಸ್ಥಾನಕ್ಕೆ ತಲುಪಿದ್ದಾರೆ. ಆಸ್ಟ್ರೇಲಿಯಾ ಆಟಗಾರರಾದ ಡೇವಿಸ್ ವಾರ್ನರ್ ಒಂದು ಸ್ಥಾನ ಮೇಲೇರಿ 4ನೇ ಸ್ಥಾನ, ಟ್ರಾವಿಸ್ ಹೆಡ್ ಆರು ಸ್ಥಾನ ಮೇಲೇರಿ 20ನೇ ಸ್ಥಾನಕ್ಕೆ ಮತ್ತು ಮಾರ್ನಸ್ ಲ್ಯಾಬುಶೇನ್​ 24 ಸ್ಥಾನ ಮೇಲೇರಿ 45ನೇ ಸ್ಥಾನದಲ್ಲಿದ್ದಾರೆ.

ನ್ಯೂಜಿಲೆಂಡ್‌ನ ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಬೌಲರ್‌ಗಳಲ್ಲಿ ಜಂಟಿ-ಎರಡನೇ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿ ಆಸ್ಟ್ರೇಲಿಯಾದ ಲೆಗ್-ಸ್ಪಿನ್ನರ್ ಆಡಮ್ ಝಂಪಾ ಮೊದಲ ಬಾರಿಗೆ ಬೌಲಿಂಗ್ ಶ್ರೇಯಾಂಕದಲ್ಲಿ ಮೊದಲ ಐದರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ್ ರೌಫ್ ಎಂಟು ಏರಿಕೆ ಕಂಡಿದ್ದು, 21ನೇ ಶ್ರೇಯಾಂಕದಲ್ಲಿದ್ದಾರೆ. ನಸೀಮ್ ಶಾ 11 ಸ್ಥಾನ ಮೇಲಕ್ಕೆತ್ತಿ 51 ನೇ ಸ್ಥಾನ, ದಕ್ಷಿಣ ಆಫ್ರಿಕಾದ ಸ್ಪಿನ್ನರ್‌ಗಳಾದ ಕೇಶವ್ ಮಹಾರಾಜ್ 10 ಸ್ಥಾನ ಮೇಲಕ್ಕೆದ್ದು 25 ನೇ ಸ್ಥಾನ ಮತ್ತು ತಬ್ರೈಜ್ 29ನೇ ಸ್ಥಾನಕ್ಕೆ ಏರಿದ್ದಾರೆ. ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್‌ವುಡ್ ಬೌಲಿಂಗ್​ನಲ್ಲಿ ನಂ.1 ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ:Asia Cup 2023: ಭಾರತದ ಸಾಂಘಿಕ ದಾಳಿಗೆ ಮಣಿದ ಲಂಕಾ.. ಫೈನಲ್​ಗೆ ಟೀಂ​ ಇಂಡಿಯಾ ಎಂಟ್ರಿ

ABOUT THE AUTHOR

...view details