ಮುಂಬೈ: ಆನಂದ್ ಮಹಿಂದ್ರಾ ಆಸ್ಟ್ರೇಲಿಯಾದಲ್ಲಿ ಭಾರತ ತಂಡ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದ ಸಂದರ್ಭದಲ್ಲಿ ಘೋಷಿಸಿದಂತೆ ಯುವ ಕ್ರಿಕಟಿಗ ಶುಬ್ಮನ್ ಗಿಲ್ ಮನೆಗೆ 12 ಲಕ್ಷ ಮೌಲ್ಯದ ಮಹೀಂದ್ರಾ ಥಾರ್ ಎಸ್‌ಯುವಿ ಕಾರನ್ನು ತಲುಪಿಸಿದ್ದಾರೆ.
ಭಾರತ ಜನವರಿಯಲ್ಲಿ ವಿರಾಟ್, ಬುಮ್ರಾ ಅಶ್ವಿನ್ ಸೇರಿದಂತೆ ಕೆಲವು ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಮಣಿಸಿ 2-1ರಲ್ಲಿ ಬಾರ್ಡರ್ ಗವಾಸ್ಕರ್ ಸರಣಿ ಎತ್ತಿ ಹಿಡಿದಿತ್ತು. ಈ ಸಂದರ್ಭದಲ್ಲಿ ಮಹೀಂದ್ರಾ ಗ್ರೂಫ್ ಅಫ್ ಕಂಪನಿಗಳ ಸಿಇಒ ಆನಂದ್ ಮಹೀಂದ್ರಾ, ಆ ಸರಣಿಯಲ್ಲಿ ಪದಾರ್ಪಣೆ ಮಾಡಿದ್ದ ಶುಬ್ಮನ್ ಗಿಲ್, ನಟರಾಜನ್, ನವದೀಪ್ ಸೈನಿ, ವಾಷಿಂಗ್ಟನ್ ಸುಂದರ್, ಶಾರ್ದುಲ್ ಠಾಕೂರ್ ಮತ್ತು ಮೊಹಮ್ಮದ್ ಸಿರಾಜ್ಗೆ ನೂತನ ಥಾರ್ ಎಸ್‌ಯುವಿ ಕಾರನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದ್ದರು.
ಅದರಂತೆ ಈಗಾಗಲೇ ಕೆಲವು ಆಟಗಾರರಿಗೆ ಕಾರನ್ನು ತಲುಪಿಸಿದ್ದರು. ಇದೀಗ ಆರಂಭಿಕ ಬ್ಯಾಟ್ಸ್ಮನ್ ಶುಬ್ಮನ್ ಗಿಲ್ ಅವರಿಗೂ ಈ ಐಶಾರಾಮಿ ಕಾರು ತಲುಪಿದ್ದು, ಗಿಲ್ ತಮ್ಮ ಟ್ವಿಟರ್ ಮೂಲಕ ಧನ್ಯವಾದ ಹೇಳಿದ್ದಾರೆ.
" ಮಹೀಂದ್ರಾ ಥಾರ್ ಅನ್ನು ಸ್ವೀಕರಿಸುತ್ತಿರುವುದಕ್ಕೆ ಖುಷಿಯಾಗಿದೆ ಮತ್ತು ನಾನು ಇದನ್ನು ಸಂಗ್ರಹಿಸಲು ನಾನು ಬಯಸುತ್ತೇನೆ. ಆನಂದ್ ಮಹೀಂದ್ರಾ ಸರ್, ನಿಮಗೆ ನಾನು ಕೃತಜ್ಞನಾಗಿದ್ದೇನೆ. ನಿಮ್ಮ ಈ ಪ್ರೋತ್ಸಾಹಕ್ಕೆ ಧನ್ಯವಾದಗಳು. ಭಾರತಕ್ಕಾಗಿ ಆಡುವುದು ಒಂದು ಗೌರವವಾಗಿದೆ ಮತ್ತು ನಾನು ಮೈದಾನಕ್ಕೆ ಕಾಲಿಟ್ಟಾಗಲೆಲ್ಲಾ ಅತ್ಯುತ್ತಮವಾದದನ್ನು ನೀಡಲು ಪ್ರಯತ್ನಿಸುತ್ತೇನೆ" ಎಂದು ಗಿಲ್ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಗಿಲ್ ಆಸೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದರು. ಅವರು ಗಬ್ಬಾದಲ್ಲಿ ನಡೆದಿದ್ದ ಕೊನೆಯ ಪಂದ್ಯದಲ್ಲಿ 91ರನ್ ಸಿಡಿಸಿ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.