ದುಬೈ: ಭಾರತ ಕ್ರಿಕೆಟ್ ತಂಡದ ಸ್ಟೈಲಿಶ್ ಆಟಗಾರ ಶುಭ್‌ಮನ್ ಗಿಲ್ ಅವರನ್ನು ಐಸಿಸಿ 2023ರ ಸೆಪ್ಟೆಂಬರ್ ತಿಂಗಳ ಆಟಗಾರ ಎಂದು ಗುರುತಿಸಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ನ ಶ್ರೇಯಾಂಕದಲ್ಲಿ ಎರಡನೇ ಸ್ಥಾನ ಹೊಂದಿರುವ ಇವರು ಸೆಪ್ಟೆಂಬರ್ ತಿಂಗಳೊಂದರಲ್ಲಿ ಏಕದಿನ ಪಂದ್ಯಗಳಿಂದ 80ರ ಸರಾಸರಿಯಲ್ಲಿ 480 ರನ್ ಕಲೆಹಾಕಿದ್ದಾರೆ. ತಿಂಗಳ ಆಟಗಾರ ಪ್ರಶಸ್ತಿಗೆ ಮೊಹಮ್ಮದ್ ಸಿರಾಜ್ ಮತ್ತು ಡೇವಿಡ್ ಮಲಾನ್ ಸ್ಪರ್ಧಿಗಳಾಗಿದ್ದರು.
ಏಷ್ಯಾಕಪ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಗಿಲ್ ಉತ್ತಮ ಪ್ರದರ್ಶನ ನೀಡಿದ್ದರು. ಏಷ್ಯಾಕಪ್ನಲ್ಲಿ 75.5ರ ಸರಾಸರಿಯಲ್ಲಿ 302 ರನ್ ಗಳಿಸಿದರು. ಫೈನಲ್ ಪಂದ್ಯದಲ್ಲಿ ಅಜೇಯ 27 ರನ್ ಪೇರಿಸಿದ್ದರು. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ 74 ರನ್ ಮತ್ತು 104 ರನ್ಗಳ ಇನ್ನಿಂಗ್ಸ್ ಕಟ್ಟಿದ್ದರು.
24 ವರ್ಷ ವಯಸ್ಸಿನ ಯುವ ಆಟಗಾರ 35 ಏಕದಿನ ಪಂದ್ಯಗಳನ್ನಾಡಿದ್ದು, 66.1 ಸರಾಸರಿಯಲ್ಲಿ ಮತ್ತು 102.84 ಸ್ಟ್ರೈಕ್‌ರೇಟ್‌ನಲ್ಲಿ 1917 ರನ್ ಕಲೆಹಾಕಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ಒಂದು ದ್ವಿಶತಕ, 6 ಶತಕ ಮತ್ತು 9 ಅರ್ಧಶತಕ ಗಳಿಸಿದ್ದಾರೆ. ಐಸಿಸಿ ಶ್ರೇಯಾಂಕದಲ್ಲಿ ಗಿಲ್ ಎರಡನೇ ಸ್ಥಾನದಲ್ಲಿದ್ದಾರೆ.
ವಿಶ್ವಕಪ್ ವೇಳೆ ಅನಾರೋಗ್ಯಕ್ಕೆ ತುತ್ತಾದ ಗಿಲ್:ಈ ವರ್ಷ ಗೋಲ್ಡನ್ ಫಾರ್ಮ್ನಲ್ಲಿರುವ ಗಿಲ್ ವಿಶ್ವಕಪ್ಗೂ ಮುನ್ನ ಅನಾರೋಗ್ಯಕ್ಕೆ ತುತ್ತಾದರು. ಇದರಿಂದ ವಿಶ್ವಕಪ್ನ ಆರಂಭಿಕ ಎರಡು ಪಂದ್ಯಗಳಾದ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನದ ಪಂದ್ಯಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಅಹಮದಾಬಾದ್ನಲ್ಲಿ ನಡೆಯಲಿರುವ ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆಗೆ ಗಿಲ್ ತಂಡಕ್ಕೆ ಮರಳುವ ಸಾಧ್ಯತೆ ಇದೆ. ಬುಧವಾರ ಗುಜರಾತ್ ತಲುಪಿರುವ ಗಿಲ್ ಗುರುವಾರ ನೆಟ್ಸ್ನಲ್ಲಿ ಬೆವರಿಳಿಸಿದ್ದಾರೆ.
ಚೇತರಿಸಿಕೊಂಡು ಗಿಲ್ ತಂಡಕ್ಕೆ ಮರಳಿದಲ್ಲಿ ಬಾಬರ್ ಅಜಮ್ ಅವರನ್ನು ಹಿಂದಿಕ್ಕಿ ಏಕದಿನ ಕ್ರಿಕೆಟ್ನ ಐಸಿಸಿ ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆದುಕೊಳ್ಳುವುದು ಖಚಿತ. ಏಕೆಂದರೆ, ಬಾಬರ್ ಅವರಿಗಿಂತ ಗಿಲ್ ಕೇಲವ 5 ರೇಟಿಂಗ್ ಪಾಯಿಂಟ್ನಿಂದ ಹಿಂದಿದ್ದಾರೆ. ಹೀಗಾಗಿ ತಂಡಕ್ಕೆ ಮರಳಿ ಒಂದು ಅರ್ಧಶತಕ ದಾಖಲಿಸಿದಲ್ಲಿ ನಂ.1 ಪಟ್ಟ ಅಲಂಕರಿಸುವರು. ವಿಶ್ವಕಪ್ನ ಎರಡು ಪಂದ್ಯದಲ್ಲಿ ಬಾಬರ್ ಅಜಮ್ 10 ಮತ್ತು 15 ರನ್ಗೆ ವಿಕೆಟ್ ಒಪ್ಪಿಸಿದ್ದಾರೆ. ಅವರ ಬ್ಯಾಟ್ನಿಂದ ಉತ್ತಮ ಪ್ರದರ್ಶನ ಮೂಡಿ ಬರುತ್ತಿಲ್ಲ. ಶನಿವಾರ ನಡೆಯುವ ಪಂದ್ಯದಲ್ಲಿ ಬಾಬರ್ ವಿಫಲರಾದರೆ, ಗಿಲ್ ಅಗ್ರಸ್ಥಾನ ಪಡೆಯುವ ಸಾಧ್ಯತೆಯೂ ಇದೆ.
ವನಿತೆಯ ಕ್ರಿಕೆಟ್ನಲ್ಲಿ ಶ್ರೀಲಂಕಾ ತಂಡದ ನಾಯಕಿ ಚಾಮರಿ ಅಥಾಪತ್ತು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇತ್ತೀಚೆಗೆ ಲಂಕಾ ತಂಡ ಇಂಗ್ಲೆಂಡ್ಗೆ ತೆರಳಿ ಆಡಿದ ಸರಣಿಯಲ್ಲಿ 2-1ರ ಐತಿಹಾಸಿಕ ಜಯ ದಾಖಲಿಸಿತ್ತು.
ಇದನ್ನೂ ಓದಿ:ವಿಶ್ವಕಪ್ ಕ್ರಿಕೆಟ್: ನ್ಯೂಜಿಲೆಂಡ್‌ಗೆ ಸಾಧಾರಣ ಗುರಿ ನೀಡಿದ ಬಾಂಗ್ಲಾದೇಶ; ಹ್ಯಾಟ್ರಿಕ್ ವಿಜಯ ಸಾಧಿಸುವುದೇ ಕೇನ್ ಟೀಂ??