ಕರ್ನಾಟಕ

karnataka

ETV Bharat / sports

ಗಿಲ್​, ಬಿಷ್ಣೋಯ್​ ಹಿಂದಿಕ್ಕಿ ಅಗ್ರ ಪಟ್ಟಕ್ಕೇರಿದ ಬಾಬರ್​, ರಶೀದ್​

ಏಕದಿನ ಬ್ಯಾಟಿಂಗ್​ ಶ್ರೇಯಾಂಕದಲ್ಲಿ ಬಾಬರ್​ ಅಜಮ್ ಮತ್ತೆ ಅಗ್ರಸ್ಥಾನ ಪಡೆದುಕೊಂಡರೆ, ಟಿ20 ಬೌಲಿಂಗ್​ನಲ್ಲಿ ರವಿ ಬಿಷ್ಣೋಯ್​ ಅವರನ್ನು ಹಿಂದಿಕ್ಕೆ ಇಂಗ್ಲೆಂಡ್​ ತಂಡದ ಆದಿಲ್​ ರಶೀದ್ ಮೊದಲಿಗರಾಗಿದ್ದಾರೆ.

Babar Azam and Adil Rashid
Babar Azam and Adil Rashid

By ETV Bharat Karnataka Team

Published : Dec 20, 2023, 7:29 PM IST

ದುಬೈ: ಏಕದಿನ ಕ್ರಿಕೆಟ್‌ ಐಸಿಸಿ ಶ್ರೇಯಾಂಕದಲ್ಲಿ ಭಾರತದ ಆರಂಭಿಕ ಆಟಗಾರ ಶುಭಮನ್​ ಗಿಲ್​ ಅವರನ್ನು ಹಿಂದಿಕ್ಕೆ ಪಾಕ್​ ತಂಡದ ಮಾಜಿ ನಾಯಕ ಬಾಬರ್​ ಅಜಮ್​ ನಂ.1 ಸ್ಥಾನಕ್ಕೇರಿದ್ದಾರೆ. ವಿಶ್ವಕಪ್ ನಂತರ ನಡೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಟಿ20 ಬೌಲಿಂಗ್​ ರ್‍ಯಾಂಕಿಂಗ್​ನಲ್ಲಿ ಅಗ್ರ ಪಟ್ಟ ಅಲಂಕರಿಸಿದ್ದ ರವಿ ಬಿಷ್ಣೋಯ್​ ಅವರನ್ನು ಇಂಗ್ಲೆಂಡ್​ ಸ್ಪಿನ್ನರ್​ ಆದಿಲ್​ ರಶೀದಿ ಮೀರಿಸಿದ್ದಾರೆ.

ಬುಧವಾರ ಐಸಿಸಿ ಬಿಡುಗಡೆ ಮಾಡಿದ ಆಟಗಾರರ ಶ್ರೇಯಾಂಕದಲ್ಲಿ ಭಾರತದ ಆರಂಭಿಕ ಬ್ಯಾಟರ್ ಗಿಲ್ 810 ಅಂಕಗಳಿಂದ ಎರಡನೇ ಸ್ಥಾನ್ಕಕೆ ಕುಸಿದರು. ಇವರು​ ಏಕದಿನ ವಿಶ್ವಕಪ್​​ನ ನಂತರ ಏಕದಿನ ಕ್ರಿಕೆಟ್‌ನಲ್ಲಿ ಆಡದಿರುವುದು ಶ್ರೇಯಾಂಕ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಬಾಬರ್ ಅಜಮ್ 824 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಕ್ರಮವಾಗಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇದ್ದಾರೆ. ಶ್ರೇಯಸ್ ಅಯ್ಯರ್ 12ನೇ ಸ್ಥಾನಕ್ಕೆ ಕುಸಿತ ಕಂಡರೆ, ಕೆ.ಎಲ್.ರಾಹುಲ್ 16ನೇ ಸ್ಥಾನದಲ್ಲಿದ್ದಾರೆ.

ಏಕದಿನ ಬೌಲಿಂಗ್​ ರ್‍ಯಾಂಕಿಂಗ್​ನಲ್ಲೂ ಬದಲಾವಣೆಯಾಗಿದ್ದು, ಆಸ್ಟ್ರೇಲಿಯಾ ವೇಗಿ ಜೋಶ್ ಹೇಜಲ್‌ವುಡ್ ಅವರನ್ನು ಹಿಂದಿಕ್ಕಿ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಕೇಶವ್ ಮಹಾರಾಜ್ ಅಗ್ರಸ್ಥಾನಕ್ಕೇರಿದ್ದಾರೆ. ವೇಗದ ಬೌಲರ್ ಮೊಹಮ್ಮದ್ ಸಿರಾಜ್ (3), ಜಸ್ಪ್ರೀತ್ ಬುಮ್ರಾ (5) ಮತ್ತು ಕುಲ್ದೀಪ್ ಯಾದವ್ (8) ಅಗ್ರ 10ರಲ್ಲಿ ಕಾಣಿಸಿಕೊಂಡಿರುವ ಭಾರತೀಯ ಆಟಗಾರರು. ಮೊಹಮ್ಮದ್ ಶಮಿ 11ನೇ ಸ್ಥಾನದಲ್ಲಿದ್ದರೆ, ಸ್ಪಿನ್ನರ್ ರವೀಂದ್ರ ಜಡೇಜಾ 22ನೇ ಸ್ಥಾನದಲ್ಲಿದ್ದಾರೆ. ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ.

ಟಿ20 ಶ್ರೇಯಾಂಕ:ಟಿ20 ಬ್ಯಾಟಿಂಗ್​ ಶ್ರೇಯಾಂಕದಲ್ಲಿ ಸೂರ್ಯಕುಮಾರ್ ಯಾದವ್ ಇನ್ನಷ್ಟು ಅಂಕಗಳನ್ನು ಪಡೆದುಕೊಂಡು ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ. ಬೌಲಿಂಗ್​ನಲ್ಲಿ ಬದಲಾವಣೆ ಆಗಿದ್ದು, ಆದಿಲ್ ರಶೀದ್ ಮೊದಲ ಸ್ಥಾನ ಹೊಂದಿದ್ದಾರೆ. ಗ್ರೇಮ್ ಸ್ವಾನ್ ನಂತರ ಬೌಲಿಂಗ್​ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ ಇಂಗ್ಲೆಂಡ್​ನ ಎರಡನೇ ಸ್ಪಿನ್ನರ್​ ಎಂಬ ಖ್ಯಾತಿಯನ್ನು ರಶೀದ್​ ಪಡೆದರು. ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕು ಟಿ20 ಪಂದ್ಯಗಳಲ್ಲಿ ಏಳು ವಿಕೆಟ್ ಕಬಳಿಸಿದ ರಶೀದ್, ಅಫ್ಘಾನಿಸ್ತಾನದ ರಶೀದ್ ಖಾನ್ (2ನೇ ಶ್ರೇಯಾಂಕ), ಭಾರತದ ರವಿ ಬಿಷ್ಣೋಯ್ (3ನೇ) ಅವರನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದಿದ್ದಾರೆ. ಶಕೀಬ್ ಟಿ20 ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ, ಪಾಂಡ್ಯ 4ನೇ ಶ್ರೇಯಾಂಕದಲ್ಲಿದ್ದಾರೆ.

ಟೆಸ್ಟ್​ ಶ್ರೇಯಾಂಕ: ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಟೆಸ್ಟ್ ಬ್ಯಾಟರ್‌ಗಳಲ್ಲಿ ಅಗ್ರಸ್ಥಾನದಲ್ಲಿದ್ದರೆ, ಜೋ ರೂಟ್ (2ನೇ) ಮತ್ತು ಸ್ಟೀವನ್ ಸ್ಮಿತ್ (3ನೇ) ನಂತರದ ಸ್ಥಾನದಲ್ಲಿದ್ದಾರೆ. ಪರ್ತ್‌ನಲ್ಲಿ ನಡೆಯುತ್ತಿರುವ ಪಾಕಿಸ್ತಾನ ವಿರುದ್ಧದ ಆರಂಭಿಕ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾದ ಉಸ್ಮಾನ್ ಖವಾಜಾ ಅಮೋಘ ಪ್ರದರ್ಶನ ನೀಡಿ 3 ಸ್ಥಾನಗಳ ಏರಿಕೆ ಕಂಡು 4ನೇ ರ್‍ಯಾಂಕಿಂಗ್ ಪಡೆದುಕೊಂಡಿದ್ದಾರೆ. 10ನೇ ರ್‍ಯಾಂಕಿಂಗ್​ನಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಇದ್ದಾರೆ. ದಕ್ಷಿಣ ಆಫ್ರಿಕಾದ ವಿರುದ್ಧ ವರ್ಷಾಂತ್ಯದಲ್ಲಿ ನಡೆಯಲಿರುವ ಸರಣಿಯಲ್ಲಿ ಭಾರತದ ಆಟಗಾರರ ಶ್ರೇಯಾಂಕ ಏರಿಕೆಯಾಗುವ ಸಾಧ್ಯತೆ ಇದೆ.

ಭಾರತದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಟೆಸ್ಟ್ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಕಗಿಸೊ ರಬಾಡ, ಪ್ಯಾಟ್​ ಕಮಿನ್ಸ್​ ಮತ್ತು ರವೀಂದ್ರ ಜಡೇಜಾ ಕ್ರಮವಾಗಿ ನಂತರದ ಸ್ಥಾನದಲ್ಲಿದ್ದಾರೆ. ಆಸೀಸ್‌ ಆಟಗಾರ ನಾಥನ್ ಲಿಯಾನ್ (5), ಮಿಚೆಲ್ ಸ್ಟಾರ್ಕ್ (8) ಮತ್ತು ಜೋಶ್ ಹ್ಯಾಜಲ್‌ವುಡ್ (10) ಪಾಕಿಸ್ತಾನದ ವಿರುದ್ಧದ ಸರಣಿಯ ಪ್ರದರ್ಶನದಿಂದ ಏರಿಕೆ ಕಂಡಿದ್ದಾರೆ. ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಜಡೇಜಾ ಅಗ್ರಸ್ಥಾನದಲ್ಲಿ ಮುಂದುವರೆದರೆ, ಅಶ್ವಿನ್ ಎರಡನೇ ಸ್ಥಾನ, ಅಕ್ಷರ್ ಪಟೇಲ್ ಐದನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ:ಹರಾಜಿನಲ್ಲಿ ಆರ್‌ಸಿಬಿಗೆ ಲಾಭವಾಗಿದ್ದೇನು?​: ನಾಯಕ ಡು ಪ್ಲೆಸಿಸ್ ಹೇಳಿದ್ದಿಷ್ಟು

ABOUT THE AUTHOR

...view details