ಧರ್ಮಶಾಲಾ (ಹಿಮಾಚಲ ಪ್ರದೇಶ):ಭಾರತ ಕ್ರಿಕೆಟ್ ತಂಡದ ಭರವಸೆಯ ಬ್ಯಾಟರ್ ಶುಭ್‌ಮನ್ ಗಿಲ್ ಪ್ರತಿ ಪಂದ್ಯದಲ್ಲೂ ಒಂದಲ್ಲೊಂದು ದಾಖಲೆ ಬರೆಯುತ್ತಿದ್ದಾರೆ. ಈ ವರ್ಷ ಗೋಲ್ಡನ್ ಫಾರ್ಮ್‌ನಲ್ಲಿರುವ ಇವರು ಪ್ರಸಕ್ತ ವಿಶ್ವಕಪ್ನಲ್ಲೂ ಅದೇ ಪ್ರದರ್ಶನ ಮುಂದುವರೆಸಿದ್ದಾರೆ. ತಮ್ಮದೇ ವಿಶಿಷ್ಟ ಆಟದ ಶೈಲಿಯಿಂದ 'ಪ್ರಿನ್ಸ್' ಎಂದು ಕರೆಸಿಕೊಳ್ಳುತ್ತಿರುವ ಗಿಲ್ ಅವರು ಕಿಂಗ್ ಕೊಹ್ಲಿಯಂತೆ ದಾಖಲೆಗಳ ಪುಟ ಸೇರುತ್ತಿದ್ದಾರೆ.
ಗಿಲ್ ಜ್ವರದಿಂದ ಮೊದಲೆರಡು ಪಂದ್ಯಕ್ಕೆ ಅಲಭ್ಯರಾದರು. ನಂತರ ಚೇತರಿಸಿಕೊಂಡು ಅಕ್ಟೋಬರ್ 14 ಶನಿವಾರ ಅಹಮದಾಬಾದ್ನಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ವಿಶ್ವಕಪ್ಗೆ ಪಾದಾರ್ಪಣೆ ಮಾಡಿದರು. ಪಾಕಿಸ್ತಾನದ ವಿರುದ್ಧ 16 ರನ್ಗಳಿಗೆ ವಿಕೆಟ್ ಕೊಟ್ಟರೆ, ಬಾಂಗ್ಲಾದೆದುರು (53) ಅರ್ಧಶತಕದ ಇನ್ನಿಂಗ್ಸ್ ಆಡಿದರು.
ಕಡಿಮೆ ಇನ್ನಿಂಗ್ಸ್‌ನಲ್ಲಿ 2,000 ರನ್: 20ನೇ ವಯಸ್ಸಿನಲ್ಲಿ ಟೀಮ್ ಇಂಡಿಯಾಕ್ಕೆ ಪಾದಾರ್ಪಣೆ ಮಾಡಿದ ಶುಭ್‌ಮನ್ ಗಿಲ್, ಅನುಭವ ಮತ್ತು ಕೌಶಲ್ಯದಿಂದ ಬ್ಯಾಟಿಂಗ್ ಪ್ರದರ್ಶಿಸುತ್ತಾ ಬಂದಿದ್ದಾರೆ. ಇದೇ ಕಾರಣಕ್ಕೆ ಮೂರು ಮಾದರಿಯ ಭಾರತದ ಕ್ರಿಕೆಟ್ ತಂಡದಲ್ಲಿ ಆರಂಭಿಕ ಸ್ಥಾನ ಪಡೆದುಕೊಂಡಿದ್ದಾರೆ. ಟೆಸ್ಟ್, ಟಿ20 ಮತ್ತು ಏಕದಿನ ತಂಡದಲ್ಲಿ ಖಾಯಂ ಸದಸ್ಯರಾಗುಳಿದರು.
2019ರಿಂದ ತಂಡದಲ್ಲಿ ಆಡುತ್ತಿರುವ ಗಿಲ್ 38 ಏಕದಿನ ಇನ್ನಿಂಗ್ಸ್‌ನಲ್ಲಿ 2,000 ರನ್ ಗಳಿಸಿದ ದಾಖಲೆ ಮಾಡಿದರು. ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 14 ರನ್ ಗಳಿಸುತ್ತಿದ್ದಂತೆ ಈ ಮೈಲುಗಲ್ಲು ತಲುಪಿದರು. 38 ಇನ್ನಿಂಗ್ಸ್‌ನಲ್ಲಿ ಈ ಸಾಧನೆಯನ್ನು ಯಾವುದೇ ಭಾರತೀಯ ಆಟಗಾರ ಮಾಡಿರಲಿಲ್ಲ. ವಿಶ್ವ ಮಟ್ಟದಲ್ಲಿ 38 ಇನ್ನಿಂಗ್ಸ್ನಿಂದ 2,000 ರನ್ ಪೂರೈಸಿದ ಮೊದಲ ಆಟಗಾರನೂ ಗಿಲ್ ಆಗಿದ್ದಾರೆ. ಇವರ ನಂತರದಲ್ಲಿ ಆಶೀಮ್ ಆಮ್ಲಾ (40), ಜಹೀರ್ ಅಬ್ಬಾಸ್ (45), ಕೆವಿನ್ ಪೀಟರ್ಸನ್ (45), ಬಾಬರ್ ಅಜಮ್ (45) ಇದ್ದಾರೆ. ಇಂದಿನ ಇನ್ನಿಂಗ್ಸ್‌ನಲ್ಲಿ ಗಿಲ್ ಕಿವೀಸ್ ವಿರುದ್ಧ 26 ರನ್ ಗಳಿಸಿ ವಿಕೆಟ್ ಕೊಟ್ಟರು.
ಈ ಸಾಧನೆ ಮಾಡಿರುವ 5ನೇ ಭಾರತೀಯ ಆಟಗಾರ ಶುಭ್ಮನ್ ಗಿಲ್. 24 ವರ್ಷ 44ನೇ ದಿನದಂದು ಇವರು 2,000 ರನ್ ಪೂರೈಸಿದ್ದಾರೆ. ಇವರಿಗಿಂತ ಸಣ್ಣ ವಯಸ್ಸಿನಲ್ಲಿ ಭಾರತದ ನಾಲ್ವರು ಆಟಗಾರರು ಈ ಮೈಲುಗಲ್ಲು ತಲುಪಿದ್ದರು. ಅದರಲ್ಲಿ ಸಚಿನ್ ತೆಂಡೂಲ್ಕರ್ (20 ವರ್ಷ್ 354 ದಿನ) ಮೊದಲಿಗರು. ನಂತರ ಯುವರಾಜ್ ಸಿಂಗ್ (22 ವರ್ಷ 51 ದಿನ), ವಿರಾಟ್ ಕೊಹ್ಲಿ (22 ವರ್ಷ 215 ದಿನ), ಸುರೇಶ್ ರೈನಾ (23 ವರ್ಷ 45 ದಿನ) ಇದ್ದಾರೆ.
ಇದನ್ನೂ ಓದಿ:ವಿಶ್ವಕಪ್ ಕ್ರಿಕೆಟ್: ಮಿಚೆಲ್ ಶತಕದಾಟ, ಭಾರತಕ್ಕೆ 274 ರನ್ ಗುರಿ ನೀಡಿದ ನ್ಯೂಜಿಲೆಂಡ್