ಮುಂಬೈ (ಮಹಾರಾಷ್ಟ್ರ):ಇಂಗ್ಲೆಂಡ್ ವಿರುದ್ಧ ಭರ್ಜರಿ ರನ್ ಅಂತರದ ಗೆಲುವು ದಾಖಲಿಸಿದರುವ ಟೀಮ್ ಇಂಡಿಯಾಕ್ಕೆ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಬೇಸರದ ಸಂಗತಿ ಹೊರಬಿದ್ದಿದೆ. ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ದೀಪ್ತಿ ಶರ್ಮಾ ಅವರ 9 ವಿಕೆಟ್ಗಳ ಬೌಲಿಂಗ್ ಕೊಡುಗೆ ಮತ್ತು ಉತ್ತಮ ಬ್ಯಾಟಿಂಗ್ ಸಹಾಯದಿಂದ ಟೀಮ್ ಇಂಡಿಯಾ 347 ರನ್ಗಳ ದಾಖಲೆಯ ಗೆಲುವು ದಾಖಲಿಸಿತು. ಆದರೆ ಆಂಗ್ಲರ ವಿರುದ್ಧ ಮೊದಲ ಇನ್ನಿಂಗ್ಸ್ನಲ್ಲಿ ಅರ್ಧಶತಕ ಗಳಿಸಿದ್ದ ಬ್ಯಾಟಿಂಗ್ ಆಲ್‌ರೌಂಡರ್ ಶುಭಾ ಸತೀಶ್ ಗಾಯಗೊಂಡಿದ್ದಾರೆ.
ಭಾರತ ಮುಂದಿನ ವಾರ ಆಸ್ಟ್ರೇಲಿಯಾದ ವಿರುದ್ಧ ಏಕೈಕ ಟೆಸ್ಟ್ ಅನ್ನು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆಡಲಿದೆ. ಡಿ. 21 ರಿಂದ 24ರ ವರೆಗೆ ನಡೆಯಲಿರುವ ಪಂದ್ಯಕ್ಕೆ ಶುಭಾ ಸತೀಶ್ ಅವರ ಲಭ್ಯತೆ ಅನುಮಾನ ಎಂದು ಹೇಳಲಾಗುತ್ತಿದೆ. ಮೊದಲ ಇನ್ನಿಂಗ್ಸ್ನಲ್ಲಿ ಅರ್ಧಶತಕ ಗಳಿಸಿದ್ದ ಶುಭ ಎರಡನೇ ಇನ್ನಿಂಗ್ಸ್ನಲ್ಲಿ ಮೈದಾನಕ್ಕೆ ಬರಲಿಲ್ಲ. ಶುಭ ಸತೀಶ್ ಅವರ ಬೆರಳಿಗೆ ಗಂಭೀರ ಗಾಯವಾಗಿದೆ ಎಂದು ಬಿಸಿಸಿಐ ತಿಳಿಸಿದೆ.
ಮೊದಲ ಇನ್ನಿಂಗ್ಸ್ನಲ್ಲಿ ಆರಂಭಿಕರನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ಶುಭಾ ನೆರವಾಗಿದ್ದರು. ಜೆಮಿಮಾ ರಾಡ್ರಿಗಸ್ ಜೊತೆಗೂಡಿದ ಶುಭಾ 115 ರನ್ಗಳ ಪಾಲುದಾರಿಕೆ ಹಂಚಿಕೊಂಡು ತಂಡಕ್ಕೆ ಆಸರೆ ಆದರು. ಆರಂಭಿಕ ಎರಡು ವಿಕೆಟ್ ಕಳೆದುಕೊಂಡು ಆತಂಕದಲ್ಲಿದ್ದ ತಂಡಕ್ಕೆ ಜೊತೆಯಾಟ ನೆರವಾಯಿತು. ಇನ್ನಿಂಗ್ಸ್ನಲ್ಲಿ 76 ಬಾಲ್ ಆಡಿದ ಶುಭಾ ಸತೀಶ್ 13 ಬೌಂಡರಿಯ ಸಹಾಯದಿಂದ 69 ರನ್ಗಳನ್ನ ಕಲೆಹಾಕಿ ಔಟ್ ಆದರು.