ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದ ವೇಳೆ 311 ರನ್ಗಳ ಬೃಹತ್ ಮೊತ್ತ ಬೆನ್ನಟ್ಟಿದ್ದನ್ನು ಶ್ರೇಯಸ್ ಅಯ್ಯರ್ ತಮಾಷೆಯಾಗಿ ವಿವರಿಸಿದ್ದಾರೆ. ದೊಡ್ಡ ಮೊತ್ತವನ್ನು ಮೀರಿ ಗೆಲುವು ಸಾಧಿಸಿರುವುದು ಅಷ್ಟೇನೂ ವಿಶೇಷ ಅನ್ನಿಸಲಿಲ್ಲ. ಇದು ಎಲ್ಲ ಪಂದ್ಯಗಳಂತೇಯೇ ಒಂದಾಗಿತ್ತು ಎಂದು ಹೇಳಿದ್ದಾರೆ.
ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 311 ರನ್ ಕಲೆಹಾಕಿದಾಗ ಕೋಚ್ ರಾಹುಲ್ ದ್ರಾವಿಡ್ ಸ್ವಲ್ಪ ಗಂಭೀರವಾಗಿದ್ದರು. ಪ್ರತಿಬಾರಿಯೂ ಅವರು ಈ ಬಗ್ಗೆ ಎಚ್ಚರಿಕೆ ಸಂದೇಶ ನೀಡುತ್ತಿದ್ದರು. ಆದರೆ, ತಂಡದ ಆಟಗಾರರು ಒತ್ತಡವನ್ನು ಮೀರಿ ಆಟವಾಡುವ ಮೂಲಕ ಜಯ ಸಲೀಸಾಗಿ ಒಲಿಯುವಂತೆ ಮಾಡಿದರು ಎಂದರು.
79 ರನ್ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಮೈದಾನಕ್ಕೆ ಬಂದ ಶ್ರೇಯಸ್ 71 ಎಸೆತಗಳಲ್ಲಿ 63 ರನ್ ಬಾರಿಸಿದರು. ಅಲ್ಲದೇ, ಸಂಜು ಸ್ಯಾಮ್ಸನ್ ಜೊತೆಗೂಡಿ 99 ರನ್ಗಳ ಜೊತೆಯಾಟ ನೀಡಿದರು.
ಈ ರೀತಿಯ ಒತ್ತಡವನ್ನು ನಾವು ಮೊದಲೂ ಎದುರಿಸಿದ್ದರಿಂದ ಯಾವುದೇ ಸಮಸ್ಯೆಯಾಗಲಿಲ್ಲ. ಇದು ನಮ್ಮ ಪಾಲಿಗೆ ಮತ್ತೊಂದು ಆಟವಾಗಿತ್ತು ಅಷ್ಟೇ. ತಂಡದ ಪ್ರತಿಯೊಬ್ಬರೂ ಉತ್ತಮವಾಗಿ ಒತ್ತಡವನ್ನು ನಿಭಾಯಿಸಿಕೊಂಡು ಆಟವಾಡಿದರು. ಅದರಲ್ಲೂ ಅಕ್ಷರ್ ಪಟೇಲ್ ಆಟ ಮಾತ್ರ ವಾಹ್ ಎನ್ನುವಂತಿತ್ತು. ಅಕ್ಷರ್ ಪಂದ್ಯವನ್ನು ಮುಕ್ತಾಯಗೊಳಿಸಿದ್ದು, ಅದ್ಭುತವಾಗಿತ್ತು ಎಂದು ಹೊಗಳಿದರು.
ಶ್ರೇಯಸ್ಗೆ ಬೇಜಾರಂತೆ:ಪಂದ್ಯದಲ್ಲಿ ಉತ್ತಮವಾಗಿ ಆಡಿದ ಶ್ರೇಯಸ್ಗೆ ತಮ್ಮ ಬಗ್ಗೆ ಈಗಲೂ ಬೇಜಾರಿದೆಯಂತೆ. ಕಾರಣ ಅವರು, ಸಲೀಸಾಗಿ ರನ್ ಕಲೆಹಾಕುತ್ತಿದ್ದರೂ ಶತಕ ಬಾರಿಸಲಿಲ್ಲ ಎಂಬುದು ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಸತತ 2 ಅರ್ಧಶತಕ ಗಳಿಸಿದಾಗ್ಯೂ ನಾನು ಅದನ್ನು ಶತಕವಾಗಿ ಮಾರ್ಪಡಿಸಲು ಸೋತಿದ್ದೇನೆ. ಈ ಬಗ್ಗೆ ನನಗೆ ಬೇಜಾರಿದೆ. ಉತ್ತಮ ಆರಂಭ ಪಡೆದಾಗ ಅದನ್ನು ಬಳಸಿಕೊಳ್ಳಬೇಕು. ಇದು ನನ್ನಿಂದ ಸಾಧ್ಯವಾಗಿಲ್ಲ ಎಂದರು. ಶ್ರೇಯಸ್ 26 ಇನ್ನಿಂಗ್ಸ್‌ಗಳಲ್ಲಿ 11 ಅರ್ಧಶತಕ ಮತ್ತು 1 ಶತಕ ಗಳಿಸಿದ್ದಾರೆ.
ಮೂರನೇ ಕ್ರಮಾಂಕ ಇಷ್ಟ:ದೇಶೀಯ ಮತ್ತು ಐಪಿಎಲ್ನಲ್ಲಿ ಮೂರನೇ ಕ್ರಮಾಂಕದಲ್ಲಿ ಆಡುವ ಶ್ರೇಯಸ್ ಭಾರತ ತಂಡದಲ್ಲಿ ಆ ಸ್ಥಾನವನ್ನು ವಿರಾಟ್ ಕೊಹ್ಲಿ ಅವರಿಗೆ ಬಿಟ್ಟುಕೊಡಬೇಕಿದೆ. ಈ ಸ್ಥಾನ ಅವರ ಫೇವರೇಟ್ ಅಂತೆ. ಬ್ಯಾಟಿಂಗ್ ಅನ್ನು ನಿಜವಾಗಿಯೂ ಆನಂದಿಸುವ ಸ್ಥಾನವೆಂದರೆ ಅದು ಮೂರನೇ ಕ್ರಮಾಂಕ ಎಂದು ಶ್ರೇಯಸ್ ಹೇಳಿದರು.
"ಬ್ಯಾಟಿಂಗ್ಗೆ ಹೇಳಿ ಮಾಡಿಸಿದ ಕ್ರಮಾಂಕವಾಗಿದೆ. ಏಕೆಂದರೆ ಆರಂಭಿಕರ ವಿಕೆಟ್ ಬಿದ್ದಾಗ ನೀವು ಆ ಕಠಿಣ ಸವಾಲನ್ನು ಮೆಟ್ಟಿ ನಿಂತು ಇನ್ನಿಂಗ್ಸ್ ಕಟ್ಟಬೇಕು. ಹೊಸದಾಗಿ ಯೋಚಿಸಿ ತಂತ್ರ ರೂಪಿಸಬೇಕು. ಓಪನರ್‌ಗಳು ಉತ್ತಮ ಜೊತೆಯಾಟ ನೀಡಿದಾಗ, ಅದೇ ವೇಗದಲ್ಲಿ ನಾವು ಬ್ಯಾಟ್ ಬೀಸಬೇಕಾಗುತ್ತದೆ. ಈ ಎರಡೂ ವೈರುಧ್ಯದಲ್ಲಿ ಬ್ಯಾಟ್ ಮಾಡುವುದು ನಿಜಕ್ಕೂ ಸವಾಲಾಗಿರುತ್ತದೆ ಎಂದರು.
ಓದಿ:IND vs WI ODI: ಸಂಘಟಿತ ಹೋರಾಟಕ್ಕೆ ಸಂದ ಫಲ; ಕೆರಿಬಿಯನ್ನರ ವಿರುದ್ಧ ಸರಣಿ ಗೆದ್ದ ಭಾರತ