ನಿಮಗಾಗಿ ನಾನು ಮತ್ತೆ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ಳುವುದಾಗಿ ಟೀಂ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ಹೇಳಿದ್ದಾರೆ. ಅವರ ಈ ದಿಢೀರ್ ಬದಲಾವಣೆಯಿಂದ ಅಭಿಮಾನಿಗಳಿಗೆ ಅಚ್ಚರಿಯ ಜೊತೆಗೆ ಖುಷಿ ಸಹ ನೀಡಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ನಿಮ್ಮ ಭವಿಷ್ಯವನ್ನು ದೇವರು ನಿರ್ಧರಿಸಲಿದ್ದಾನೆ. ಜನರ ಪ್ರೀತಿ ಮತ್ತು ಒತ್ತಾಯದಿಂದ ಬರುವ ತಿಂಗಳಿನಿಂದ (ಫೆಬ್ರವರಿ) ನಾನು ಮತ್ತೆ ಕ್ರಿಕೆಟ್ ಮೈದಾನಕ್ಕಿಳಿಯಲಿದ್ದೇನೆ. ನಿಮ್ಮ ಪ್ರೀತಿ ಮತ್ತು ಹಾರೈಕೆಗೆ ನಾನು ಚಿರಋಣಿ. ನಮ್ಮ ತಂಡಕ್ಕೆ ಸದಾ ಬೆಂಬಲ ನೀಡಿರಿ. ನಿಜವಾದ ಅಭಿಮಾನಿಗಳು ಕಠಿಣ ಸಮಯದಲ್ಲೂ ಬೆಂಬಲ ಸೂಚಿಸುತ್ತಾರೆ ಎಂದು ನಾನು ಭಾವಿಸಿದ್ದೇನೆ ಎಂದು ಇನ್ಸ್ಟಾದಲ್ಲಿ ಯುವಿ ಬರೆದುಕೊಂಡಿದ್ದಾರೆ.
ತಾವು ತೆಗೆದುಕೊಂಡ ನಿವೃತ್ತಿಯ ನಿರ್ಧಾರವನ್ನು ಮತ್ತೆ ಹಿಂಪಡೆದುಕೊಳ್ಳುವುದಾಗಿ ಘೋಷಿಸುತ್ತಿದ್ದಂತೆ ಅಭಿಮಾನಿಗಳು ಸಂಪಸ ವ್ಯಕ್ತಪಡಿಸಿದ್ದಾರೆ. 2022ರಲ್ಲಿ ಸಿಕ್ಸರ್ ಸಾಮ್ರಾಟ್ ಯುವಿ ಕ್ರಿಕೆಟ್ ಮೈದಾನದಲ್ಲಿ ಓಡಾಡಲಿರುವ ದೃಶ್ಯವನ್ನು ಮತ್ತೆ ನೋಡುವ ಭಾಗ್ಯ ಸಿಗಲಿದೆ. ನಿವೃತ್ತಿ ಬಳಿಕ ರೋಡ್ ಸೆಫ್ಟಿ ಟೂರ್ನಮೆಂಟ್ನಲ್ಲಿ ಇಂಡಿಯಾ ಲೆಜೆಂಡ್ ಪರವಾಗಿ ಕಣಕ್ಕಿಳಿದಿದ್ದರು.
2011ರ ವಿಶ್ವಕಪ್‌ನಲ್ಲಿ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿದ ಯುವರಾಜ್ ಸಿಂಗ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದಾದ ಬಳಿಕ ಮಂಕಾದ ಆಟ ಹಾಗೂ ಫೀಲ್ಡಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡುಬಂದಿದ್ದರಿಂದ ಯುವರಾಜ್ 2019ರಲ್ಲಿ ಎಲ್ಲ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ನೀಡುವುದಾಗಿ ದಿಢೀರ್ ಘೋಷಣೆ ಮಾಡಿದ್ದರು. ಈ ದಿಢೀರ್ ನಿರ್ಧಾರ ಹಲವು ಅಭಿಮಾನಿಗಳಿಗೆ ನಿರಾಸೆ ಮೂಡಿಸಿತ್ತು.