ನವದೆಹಲಿ: ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ನಡುವಿನ ವಿಚ್ಛೇದನದ ಸುದ್ದಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಟೆನ್ನಿಸ್ ತಾರೆ ಹಾಗೂ ಕ್ರಿಕೆಟ್ ಸ್ಟಾರ್ ನಡುವೆ ಅಧಿಕೃತವಾಗಿ ವಿಚ್ಛೇದನವಾಗಿದೆ, ಅವರಿಬ್ಬರು ಬೇರೆ ಬೇರೆಯಾಗಿದ್ದಾರೆ ಎನ್ನುವ ರೂಮರ್ ಹರಿದಾಡಿತ್ತು. ಆದರೆ ಈ ರೂಮರ್ ಬಗ್ಗೆ ಇಬ್ಬರೂ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಆದರೆ, ಇತ್ತೀಚಿನ ಬೆಳವಣಿಗೆಯೊಂದು ಅವರ ವಿಚ್ಛೇದನದ ಬಗ್ಗೆ ಮತ್ತೆ ಗಮನ ಸೆಳೆದಿದೆ.
ಪಾಕಿಸ್ತಾನಿ ಕ್ರಿಕೆಟ್ ಆಟಗಾರ ಶೋಯೆಬ್ ಮಲಿಕ್ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಮಾಡಿರುವ ದೊಡ್ಡ ಬದಲಾವಣೆಯೇ ಇದಕ್ಕೆ ಕಾರಣ. ಶೋಯೆಬ್ ಮಲಿಕ್ ತಮ್ಮ ಇನ್ಸ್ಟಾಗ್ರಾಂ ಖಾತೆಯ ಬಯೋದಿಂದ ಸಾನಿಯಾ ಮಿರ್ಜಾ ಅವರು ತಮ್ಮ ಪತ್ನಿ ಎಂಬ ಉಲ್ಲೇಖವನ್ನು ತೆಗೆದು ಹಾಕಿದ್ದಾರೆ. ಇದೇ ಬೆಳವಣಿಗೆ ಇಷ್ಟೆಲ್ಲ ಸುದ್ದಿಯಾಗಲು ಕಾರಣ. ಶೋಯೆಬ್ ಮಲಿಕ್ ತಮ್ಮ ಇನ್‌ಸ್ಟಾಗ್ರಾಮ್ ಬಯೋದಿಂದ 'ಸಾನಿಯಾ ಮಿರ್ಜಾ ಅವರ ಪತಿ' ಎಂಬುದನ್ನು ಅಳಿಸಿ ಹಾಕಿದ್ದಾರೆ.
ಈ ಹಿಂದೆ, ಪಾಕಿಸ್ತಾನಿ ಕ್ರಿಕೆಟಿಗ ತಮ್ಮ ಇನ್‌ಸ್ಟಾಗ್ರಾಮ್ ಬಯೋದಲ್ಲಿ 'ಸೂಪರ್ ಮಹಿಳೆ ಸಾನಿಯಾ ಮಿರ್ಜಾ ಅವರ ಪತಿ' ಎಂದು ಬರೆದುಕೊಂಡಿದ್ದರು. ಆದರೆ ಇದೀಗ ಬಯೋವನ್ನು ಮಲಿಕ್ ಎಡಿಟ್ ಮಾಡಿದ್ದು, 'ಸಾನಿಯಾ ಮಿರ್ಜಾ ಪತಿ' ಎಂಬ ಮಾಹಿತಿ ಕಾಣೆಯಾಗಿದೆ. ಸಾನಿಯಾ ಹಾಗೂ ಶೋಯೆಬ್ ಶ್ರೀಘ್ರದಲ್ಲೇ ಬೇರೆ ಬೇರೆಯಾಗುತ್ತಾರೆ ಎಂದು ನೆಟಿಜನ್ಸ್ ಮಾತನಾಡಿಕೊಳ್ಳುತ್ತಿದ್ದಾರೆ.