ನವದೆಹಲಿ :ಪಾಕಿಸ್ತಾನ ತಂಡದ ಮಾಜಿ ವೇಗದ ಬೌಲರ್ ಶೋಯಬ್ ಅಖ್ತರ್ ತಮ್ಮ ನೆಚ್ಚಿನ ಆಲ್ಟೈಮ್ ಏಕದಿನ ತಂಡವನ್ನು ಪ್ರಕಟಿಸಿದ್ದು, ಪ್ರಸ್ತುತ ಏಕದಿನ ಕ್ರಿಕೆಟ್ನ ರನ್ಮಷಿನ್ ಎನಿಸಿಕೊಂಡಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ತಮ್ಮ ದೇಶದ ಬಾಬರ್ ಅಜಮ್ರನ್ನು ತಂಡದಿಂದ ಹೊರಗಿಟ್ಟಿದ್ದಾರೆ. ವಿಶೇಷವೆಂದರೆ ಇದರಲ್ಲಿ ನಾಲ್ವರು ಭಾರತೀಯರನ್ನು ಆಖ್ತರ್ ಆಯ್ಕೆ ಮಾಡಿದ್ದಾರೆ.
ಖಾಸಗಿ ಕ್ರೀಡಾ ವೆಬ್ಸೈಟ್ಗೆ ನೀಡಿದ ಸಂದರ್ಶನದಲ್ಲಿ ಅಖ್ತರ್ ಆರಂಭಿಕರಾಗಿ ವೆಸ್ಟ್ ಇಂಡೀಸ್ನ ಗಾರ್ಡನ್ ಗ್ರೀನಿಡ್ಜ್ ಮತ್ತು ಲೆಜೆಂಡರಿ ಬ್ಯಾಟ್ಸ್ಮನ್ ಸಚಿನ್ ತೆಂಡೂಲ್ಕರ್ರನ್ನು ಆಯ್ಕೆ ಮಾಡಿದ್ದಾರೆ. 3ನೇ ಕ್ರಮಾಂಕದಲ್ಲಿ ಇಂಜಮಾಮ್ ಉಲ್ ಹಕ್ ಸ್ಥಾನ ಪಡೆದಿದ್ದಾರೆ. ಆದರೆ, ಪಾಕ್ ಪರ ಇನ್ನಿಂಗ್ಸ್ ಆರಂಭಿಸುತ್ತಿದ್ದ ಸಯೀದ್ ಅನ್ವರ್ ಅವರನ್ನು 4ನೇ ಕ್ರಮಾಂಕದಲ್ಲಿರಿಸಿದ್ದಾರೆ.
ಅಖ್ತರ್ ತಮ್ಮ ತಂಡದ ವಿಕೆಟ್ ಕೀಪರ್ ಮತ್ತು 5ನೇ ಕ್ರಮಾಂಕದ ಬ್ಯಾಟ್ಸ್ಮನ್ ಆಗಿ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಆಯ್ಕೆ ಮಾಡಿದ್ದಾರೆ. ಆಶ್ಚರ್ಯವೆಂದರೆ ಅಖ್ತರ್ ಮತ್ತೊಬ್ಬ ವಿಕೆಟ್ ಕೀಪರ್ ಆಗಿ ಆಸ್ಟ್ರೇಲಿಯಾದ ಆ್ಯಡಂ ಗಿಲ್ಕ್ರಿಸ್ಟ್ ಅವರನ್ನು 6ನೇ ಕ್ರಮಾಂದಲ್ಲಿರಿಸಿದ್ದಾರೆ. ಆದರೆ, ಅವರನ್ನು ಕೇವಲ ಬ್ಯಾಟ್ಸ್ಮನ್ ಆಗಿ ಸೇರಿಸುವುದಾಗಿ ಹೇಳಿದ್ದಾರೆ.
7ನೇ ಕ್ರಮಾಂದಲ್ಲಿ 2011ರ ವಿಶ್ವಕಪ್ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿರುವ ಭಾರತದ ಯುವರಾಜ್ ಸಿಂಗ್ಗೆ ಮಣೆ ಹಾಕಿದ್ದಾರೆ. ವಾಸೀಂ ಅಕ್ರಮ್, ವಾಕರ್ ಯೂನಿಸ್ ಮತ್ತು ಕಪಿಲ್ ದೇವ್ರನ್ನು ವೇಗಿಗಳಾಗಿ ಹಾಗೂ ಆಸ್ಟ್ರೇಲಿಯಾದ ಸ್ಪಿನ್ ಲೆಜೆಂಡ್ ಶೇನ್ವಾರ್ನ್ರನ್ನು ಏಕೈಕ ಸ್ಪಿನ್ನರ್ ಮತ್ತು ತಂಡದ ನಾಯಕನನ್ನಾಗಿ ಹೆಸರಿಸಿದ್ದಾರೆ.