ಬೆಂಗಳೂರು : ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಶಿವಮೊಗ್ಗ ಲಯನ್ಸ್ 36 ರನ್‌ಗಳ ಜಯ ಸಾಧಿಸುವುದರೊಂದಿಗೆ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ. ರೋಹನ್ ಕದಂ (70) ನಿಹಾಲ್ ಉಲ್ಲಾಳ್ (40) ಕೆಳ ಕ್ರಮಾಂಕದಲ್ಲಿ ಕ್ರಾಂತಿ ಕುಮಾರ್ (25) ರನ್‌ಗಳ ಉಪಯುಕ್ತ ಕೊಡುಗೆ ನೀಡುವ ಮೂಲಕ ಲಯನ್ಸ್ ಗೆಲುವಿನ ರೂವಾರಿಗಳಾಗಿ ಹೊರಹೊಮ್ಮಿದರು.
ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಶಿವಮೊಗ್ಗ ಲಯನ್ಸ್ ಪರ ಆರಂಭಿಕರಾದ ನಿಹಾಲ್ ಉಳ್ಳಾಲ್ ಮತ್ತು ರೋಹನ್ ಕದಂ ಮೊದಲ 5 ಓವರ್‌ಗಳಲ್ಲಿ 65 ರನ್ ಜೊತೆಯಾಟದ ಮೂಲಕ ಪವರ್ ಪ್ಲೇ ನ ಸಂಪೂರ್ಣ ಸದುಪಯೋಗ ಪಡೆದುಕೊಂಡರು. ಕೇವಲ 17 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಸೇರಿದಂತೆ 40 ರನ್ ಗಳಿಸಿದ ನಿಹಾಲ್ ಉಳ್ಳಾಲ್ ಬೆಂಗಳೂರು ಬ್ಲಾಸ್ಟರ್ಸ್ ಪರ ಪ್ರದೀಪ್.ಟಿ ಎಸೆದ ಐದನೇ ಓವರ್‌ನ ಕೊನೆಯ ಎಸೆತದಲ್ಲಿ ಔಟಾದರು.
ನಂತರ ಬಂದ ರೋಹಿತ್ ಕುಮಾರ್ 11 ರನ್ ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಅಭಿನವ್ ಮನೋಹರ್ ಗೆ ಜತೆಯಾದ ರೋಹನ್ ಕದಂ ವೈಯಕ್ತಿಕ ಅರ್ಧಶತಕ ದಾಖಲಿಸಿ ಮಿಂಚಿದರು. ಅಭಿನವ್ ಮನೋಹರ್ (31) ರನ್ ಗಳಿಸಿ ಎಲ್.ಆರ್ ಕುಮಾರ್ ಎಸೆತದಲ್ಲಿ ಬೌಲ್ಡ್ ಆದರು. 47 ಎಸೆತಗಳಲ್ಲಿ 70 ರನ್ ಗಳಿಸಿದ್ದ ರೋಹನ್ ಕದಂ, ಬ್ಲಾಸ್ಟರ್ಸ್ ಪರ ದಾಳಿಗಿಳಿದ ಟಿ.ಪ್ರದೀಪ್ ಗೆ ವಿಕೆಟ್ ಒಪ್ಪಿಸಿ ಹೊರ ನಡೆದರು. ಇನ್ನು ಕೆಳ ಕ್ರಮಾಂಕದಲ್ಲಿ ಕ್ರಾಂತಿ ಕುಮಾರ್ 10 ಎಸೆತಗಳಲ್ಲಿ 25 ರನ್ ಗಳಿಸುವ ಮೂಲಕ ಶಿವಮೊಗ್ಗ ಲಯನ್ಸ್ 200 ರನ್ ಗಡಿ ದಾಟಿತು.