ಕರ್ನಾಟಕ

karnataka

ETV Bharat / sports

'ಗಬ್ಬರ್​​ಸಿಂಗ್​' ಶಿಖರ್​ ಧವನ್​ ಭಾವನಾತ್ಮಕ ಸಂದೇಶ: ವಿಶ್ವಕಪ್​ ಗೆದ್ದು ಬನ್ನಿ ಎಂದು ತಂಡಕ್ಕೆ ಶುಭ ಹಾರೈಕೆ - ಏಕದಿನ ವಿಶ್ವಕಪ್​

ವಿಶ್ವಕಪ್​ನಲ್ಲಿ ಸ್ಥಾನ ಪಡೆಯಲು ವಿಫಲರಾದ 'ಗಬ್ಬರ್​ಸಿಂಗ್​' ಶಿಖರ್​ ಧವನ್​​, ಟ್ರೋಫಿ ಗೆದ್ದು ಬನ್ನಿ ಎಂದು ಆಯ್ಕೆಯಾದ ಭಾರತ ತಂಡಕ್ಕೆ ಶುಭ ಕೋರಿದ್ದಾರೆ.

ಶಿಖರ್​ ಧವನ್
ಶಿಖರ್​ ಧವನ್

By ETV Bharat Karnataka Team

Published : Sep 7, 2023, 1:05 PM IST

ನವದೆಹಲಿ :ತವರಿನಲ್ಲಿ ನಡೆಯುವ ಐಸಿಸಿ ಏಕದಿನ ವಿಶ್ವಕಪ್​ಗೆ ರೋಹಿತ್​ ಶರ್ಮಾ ನೇತೃತ್ವದಲ್ಲಿ 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದ ಗಬ್ಬರ್​ಸಿಂಗ್​ ಉಪನಾಮದ ಎಡಗೈ ಹಿರಿಯ ಬ್ಯಾಟರ್​ ಶಿಖರ್​ ಧವನ್​ ಈ ಬಾರಿಯ ವಿಶ್ವಕಪ್​ ತಪ್ಪಿಸಿಕೊಳ್ಳಲಿದ್ದು, ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ.

ವಿಶ್ವಕಪ್​ನಲ್ಲಿ ಆಡುವ ಮಹದಾಸೆ ಹೊಂದಿದ್ದ ಶಿಖರ್​ ಹಲವು ಸಂದರ್ಶನಗಳಲ್ಲಿ ಈ ಬಗ್ಗೆ ಹೇಳಿಕೊಂಡಿದ್ದರು. ಭಾರತ ತಂಡದಿಂದ ಹೊರಬಿದ್ದರೂ ಮರಳಿ ಸೇರುವ ಯತ್ನ ನಡೆಸುತ್ತಿದ್ದರು. ಆದರೆ, ಭಾರತ ಕ್ರಿಕೆಟ್​ ನಿಯಂತ್ರಣ ಮಂಡಳಿ ಹೊಸಬರಿಗೆ ಮಣೆ ಹಾಕಿದ್ದು, ಹಿರಿಯ ಆಟಗಾರನಿಗೆ ಸ್ಥಾನ ನಿರಾಕರಿಸಲಾಗಿದೆ. ಆದಾಗ್ಯೂ, ಗಬ್ಬರ್​ಸಿಂಗ್ ವಿಶ್ವಕಪ್​ಗೆ ಆಯ್ಕೆಯಾಗಿರುವ ತಂಡವನ್ನು ಅಭಿನಂದಿಸಿದ್ದು, ತಂಡ ಪ್ರಶಸ್ತಿ ಗೆದ್ದು ಬರಲಿ ಎಂದು ಶುಭ ಕೋರಿದ್ದಾರೆ.

ಎಕ್ಸ್​ನಲ್ಲಿ(ಹಿಂದಿನ ಟ್ವಿಟರ್​) ಸಂದೇಶ ಹಂಚಿಕೊಂಡಿರುವ ಹಿರಿಯ ಆಟಗಾರ, 2023ರ ವಿಶ್ವಕಪ್​ನ ಭಾರತ ತಂಡಕ್ಕೆ ಆಯ್ಕೆಯಾದ ನನ್ನ ಸಹ ಆಟಗಾರರು ಮತ್ತು ಸ್ನೇಹಿತರಿಗೆ ಅಭಿನಂದನೆಗಳು. 140 ಕೋಟಿ ಜನರ ಬೆಂಬಲ ನಿಮಗಿದೆ. ಅಷ್ಟು ಜನರ ಭರವಸೆ ಮತ್ತು ಕನಸುಗಳನ್ನು ನೀವು ಹೊತ್ತಿದ್ದೀರಿ. ವಿಶ್ವಕಪ್​ನಲ್ಲಿ ದೇಶಕ್ಕೆ ಕಪ್​ ತನ್ನಿ 'ಟೀಂ ಭಾರತ' ಎಂದು ಹೇಳಿದ್ದಾರೆ.

ಕಳಪೆ ಫಾರ್ಮ್​ನಿಂದ ಶಿಖರ್ ಔಟ್​:ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಐಸಿಸಿ ವಿಶ್ವಕಪ್‌ಗೆ ತಾತ್ಕಾಲಿಕ 15 ಮಂದಿಯ ತಂಡವನ್ನು ಇತ್ತೀಚೆಗಷ್ಟೇ ಪ್ರಕಟಿಸಿದೆ. ಏಕದಿನದಲ್ಲಿ ಕಳಪೆ ಫಾರ್ಮ್‌ನಿಂದಾಗಿ ಧವನ್ ಅವರನ್ನು ತಂಡದಿಂದ ಕೈಬಿಡಲಾಗಿತ್ತು. 2022 ರ ಡಿಸೆಂಬರ್​ನಲ್ಲಿ ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ಧವನ್​ ಆಡಿದ್ದರು. ಅದಾದ ಬಳಿಕ ಅವರು ಮರಳಿ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು.

ಯುವ ಆಟಗಾರರ ಎಂಟ್ರಿ:ಭಾರತ ತಂಡಕ್ಕೆ ಯುವ ಆಟಗಾರರ ಖಡಕ್​ ಎಂಟ್ರಿಯೇ ಹಿರಿಯ ಆಟಗಾರರ ತೆರೆಮರೆಗೆ ಕಾರಣವಾಗಿದೆ. ಶುಭ್​ಮನ್​ ಗಿಲ್​, ಇಶಾನ್​ ಕಿಶನ್​, ಶಾರ್ದೂಲ್​ ಠಾಕೂರ್​ರಂತಹ ಆಟಗಾರರ ನೀಡುತ್ತಿರುವ ಉತ್ತಮ ಪ್ರದರ್ಶನದಿಂದಾಗಿ ತಂಡದಲ್ಲಿ ಸ್ಪರ್ಧೆ ಹೆಚ್ಚಿದೆ. ಹೀಗಾಗಿ ಶಿಖರ್​ ಮತ್ತೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ.

ಭಾರತ ತಂಡದ ನಾಯಕರಾಗಿಯೂ ಗುರುತಿಸಿಕೊಂಡಿದ್ದ ಧವನ್​, ವೈಯಕ್ತಿಕ ಪ್ರದರ್ಶನದಲ್ಲಿ ತುಸು ಹಿನ್ನಡೆ ಅನುಭವಿಸಿದರು. ಕಳೆದ ವರ್ಷ 74.21 ಸ್ಟ್ರೈಕ್ ರೇಟ್‌ನೊಂದಿಗೆ 34.40ರ ಸರಾಸರಿಯಲ್ಲಿ ಬ್ಯಾಟ್​ ಮಾಡಿದ್ದರು. 2023 ರ ಐಪಿಎಲ್​ನಲ್ಲೂ ಎಡಗೈ ದಾಂಡಿಗ 142.91 ಸ್ಟ್ರೈಕ್‌ರೇಟ್‌ನೊಂದಿಗೆ 41.44 ರ ಬ್ಯಾಟಿಂಗ್​ ಸರಾಸರಿ ಹೊಂದಿದ್ದಾರೆ. ಪಂಜಾಬ್ ಕಿಂಗ್ಸ್ ಪರ ಆಡುವ ಧವನ್ 11 ಪಂದ್ಯಗಳಲ್ಲಿ 373 ರನ್ ಗಳಿಸಿದ್ದರು. ಅಕ್ಟೋಬರ್​ 5 ರಿಂದ ವಿಶ್ವಕಪ್​ ಆರಂಭವಾಗಲಿದೆ.

ಇದನ್ನೂ ಓದಿ:Asia Cup 2023: ಉಲ್​ ಹಕ್​, ರಿಜ್ವಾನ್ ಅರ್ಧಶತಕದ ಆಟ.. ಬಾಂಗ್ಲಾ ವಿರುದ್ಧ ಪಾಕ್​ಗೆ 7 ವಿಕೆಟ್​ಗಳ ಭರ್ಜರಿ ಗೆಲುವು

ABOUT THE AUTHOR

...view details