ನವದೆಹಲಿ :ಭಾರತ ಇಂಗ್ಲೆಂಡ್ ಪ್ರವಾಸಕ್ಕಾಗಿ ಎರಡೂವರೆ ತಿಂಗಳು ಪ್ರವಾಸ ಕೈಗೊಳ್ಳಲಿದೆ. ಈ ವೇಳೆ ಶ್ರೀಲಂಕಾ ವಿರುದ್ಧ ಸೀಮಿತ ಓವರ್ಗಳ ಸರಣಿಗಾಗಿ ಮತ್ತೊಂದು ತಂಡವನ್ನು ಕಟ್ಟಲು ಬಿಸಿಸಿಐ ನಿರ್ಧರಿಸಿದೆ. ಈ ತಂಡಕ್ಕೆ ಗಬ್ಬರ್ ಖ್ಯಾತಿಯ ಶಿಖರ್ ಧವನ್ ನಾಯಕನಾಗುವ ಸಾಧ್ಯತೆಯಿದೆ.
ಕ್ವಾರಂಟೈನ್ ಕಾರಣದಿಂದ ಭಾರತ ಸೀನಿಯರ್ಸ್ ತಂಡ ಜುಲೈನಲ್ಲಿ ಯಾವುದೇ ಪಂದ್ಯಗಳಿಲ್ಲದಿದ್ದರೂ ಇಂಗ್ಲೆಂಡ್ನಲ್ಲೇ ಉಳಿಯಬೇಕಾಗಿದೆ. ಹಾಗಾಗಿ, ವೈಟ್ಬಾಲ್ ಸ್ಪೆಷಲಿಸ್ಟ್ ಮತ್ತು ಕೆಲವು ಯುವ ಆಟಗಾರರು ಈ ಸರಣಿಯಲ್ಲಿ ಅವಕಾಶ ಪಡೆಯುವ ಸಾಧ್ಯತೆಯಿದೆ.
ಈ ಸರಣಿಗೆ ಟೆಸ್ಟ್ ತಂಡದಿಂದ ಹೊರ ಬಿದ್ದಿರುವ ವೈಟ್ ಬಾಲ್ ತಂಡದ ಖಾಯಂ ಆಟಗಾರ ಶಿಖರ್ ಧವನ್, ಭುವನೇಶ್ವರ್ ಕುಮಾರ್, ಪೃಥ್ವಿ ಶಾ,ಕುಲ್ದೀಪ್ ಯಾದವ್ ಜೊತೆಗೆ ವೈಟ್ ಬಾಲ್ ಸ್ಪೆಷಲಿಸ್ಟ್ಗಳಾದ ದೀಪಕ್ ಚಹರ್, ಮನೀಶ್ ಪಾಂಡೆ, ಕೃನಾಲ್ ಪಾಂಡ್ಯ ಹಾಗೂ ಇತ್ತೀಚೆಗಷ್ಟೇ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿರುವ ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ರಾಹುಲ್ ಚಹರ್ ತಂಡದಲ್ಲಿ ಆಡುವ ಸಾಧ್ಯತೆ ಹೆಚ್ಚಿದೆ.
2021ರ ಐಪಿಎಲ್ನಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದ ಆರ್ಸಿಬಿ ಮತ್ತು ಕರ್ನಾಟಕದ ದೇವದತ್ ಪಡಿಕ್ಕಲ್, ರಾಜಸ್ಥಾನ್ ರಾಯಲ್ಸ್ನ ಚೇತನ್ ಸಕಾರಿಯಾ, ಪಂಜಾಬ್ ಕಿಂಗ್ಸ್ ತಂಡದ ಹರ್ಪ್ರೀತ್ ಸಿಂಗ್ ತಂಡದ ಭಾಗವಾಗುವ ಸಾಧ್ಯತೆಯಿದೆ.